ಕಾಸರಗೋಡು: ಕುಟುಂಬಶ್ರೀ ವತಿಯಿಂದ ರಾಜ್ಯಮಟ್ಟದ'ಆರಂಗ್-ಸರ್ಗೋತ್ಸವ 2024 ಕಾರ್ಯಕ್ರಮ ಕಾಸರಗೋಡು ಪಿಲಿಕ್ಕೋಡಿನಲ್ಲಿ ಜೂ. 7ರಿಂದ 9ರ ವರೆಗೆ ಜರುಗಲಿದೆ. ಸರ್ಗೋತ್ಸವ ಕಾರ್ಯಕ್ರಮದ ಸಿದ್ಧತಾ ಕಾರ್ಯ ಪೂರ್ಣಗೊಂಡಿರುವುದಾಗಿ ತ್ರಿಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
18 ರಿಂದ 40 ವರ್ಷ ವಯಸ್ಸಿನ ಯುವಕರಿಗಾಗಿ ರಚಿಸಲಾದ ಸಹಾಯಕ ಗುಂಪುಗಳಿಗೆ ವಿಶೇಷ ಸ್ಪರ್ಧೆಗಳು ನಡೆಯಲಿವೆ. ಕುಟುಂಬಶ್ರೀ ನೆರೆಕರೆ ಗುಂಪುಗಳಿಗೆ 46, ಸಹಾಯಕ ಸದಸ್ಯರಿಗೆ 46 ಮತ್ತು ಸಾಮಾನ್ಯ ಕಾರ್ಯಕ್ರಮಗಳಿಗಾಗಿ 3 ಸ್ಪರ್ಧೆಗಳು 13 ವೇದಿಕೆಗಳಲ್ಲಿ ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ 3500 ಕಲಾವಿದರು, ಕುಟುಂಬಶ್ರೀ ಸದಸ್ಯರು ಮತ್ತು ಸಾರ್ವಜನಿಕರು ಮೂರು ದಿವಸಗಳಲ್ಲಾಗಿ ಕಲೋತ್ಸವ ನಗರಕ್ಕೆ ತಲುಪಲಿದ್ದಾರೆ. ಪಯ್ಯನ್ನೂರು, ಚೆರುವತ್ತೂರು, ನೀಲೇಶ್ವರಂ ಮತ್ತು ಕಾಞಂಗಾಡ್‍ನಲ್ಲಿ ಸ್ಪರ್ಧಿಗಳ ವಸತಿ ಸೌಕರ್ಯವನ್ನು ಏರ್ಪಡಿಸಲಾಗಿದೆ. ಅರಂಗ್ ಸರ್ಗೋತ್ಸವ 2024ರ ಅಂಗವಾಗಿ 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಇಲ್ಲಿಯವರೆಗೆ 2 ವಿಚಾರ ಸಂಕಿರಣಗಳು, 'ಆರಂಗ್'ಹಿಂದಿನ ವಿಜೇತರ ಕೂಟ ಹಾಗೂ ಬೀದಿ ಬದಿ ಚಿತ್ರಕಲೆ ಮುಂತಾದ ಪೂರಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಿಲ್ಲೆಯ ಎಲ್ಲಾ 12456 ನೆರೆಕರೆ ಗುಂಪುಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ. ಜೂ.7ರಂದು ಮಧ್ಯಾಹ್ನ 3ಕ್ಕೆ ಕಾಲಿಕ್ಕಡವು ಪಂಚಾಯಿತಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಸಮಾರಂಭ ಉದ್ಘಾಟಿಸುವರು. ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಲಾಂಛನ ಬಿಡುಗಡೆಗೊಳಿಸುವರು. ಜಾಫರ್ ಮಾಲಿಕ್ ಐ.ಎ.ಎಸ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣ ಉದ್ದೇಶದೊಂದಿಗೆ ಕೇರಳ ಸರ್ಕಾರದ ಅಧೀನದಲ್ಲಿರುವ ರಾಜ್ಯ ಬಡತನ ನಿರ್ಮೂಲನಾ ಮಿಷನ್ 1998 ರ ಮೇ 17 ರಂದು ಕುಟುಂಬಶ್ರೀಯನ್ನು ಪ್ರಾರಂಭಿಸಿದೆ. ವಿಶ್ವಕ್ಕೆ ಮಾದರಿಯಾಗಿರುವ ಮಹಿಳಾ ಸಬಲೀಕರಣ ಆಂದೋಲನ ನಡೆಸಿಕೊಂಡು ಬರುತ್ತಿದ್ದು, ಮೊದಲ ಹಂತದಲ್ಲಿ ಮಹಿಳಾ ಸಬಲೀಕರಣ, ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಕಾರ್ಯಕ್ರಮ ಸಮಿತಿ ಅಧ್ಯಕ್ಷೆ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸಂಚಾಲಕ ಟಿಟಿ ಸುರೇಂದ್ರನ್, ಪ್ರಚಾರಸಮಿತಿ ಅಧ್ಯಕ್ಷ ವಿವಿ ಸಜೀವನ್, ಆಹಾರ ಸಮಿತಿ ಅಧ್ಯಕ್ಚೆ ಪಿ.ಪ್ರಸನ್ನಕುಮಾರಿ, ಸಿಸಿ ನಿಶಾದ್, ಆಯೇಷಾ ಇಬ್ರಾಹಿಂ, ಜ್ಯೋತಿಶ್ ಎ, ರತೀಶ್ ಪಿಲಿಕೋಡ್ ಉಪಸಿತರಿದ್ದರು.