ನವದೆಹಲಿ: ರಸ್ತೆಗಳು ಸುಸ್ಥಿತಿಯಲ್ಲಿಲ್ಲದಿದ್ದರೆ ಹೆದ್ದಾರಿ ಏಜೆನ್ಸಿಗಳು ಟೋಲ್ ವಿಧಿಸಬಾರದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಹೇಳಿದ್ದಾರೆ.
ಇಂದು ಉಪಗ್ರಹ ಆಧಾರಿತ ಟೋಲಿಂಗ್ ಕುರಿತ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ಗಡ್ಕರಿ, ಈ ಹಣಕಾಸು ವರ್ಷದಲ್ಲಿ 5,000 ಕಿ.ಮೀ.ಗೂ ಹೆಚ್ಚು ಉಪಗ್ರಹ ಆಧಾರಿತ ಟೋಲಿಂಗ್, ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ(GNSS) ಅನ್ನು ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.
"ನೀವು ಉತ್ತಮ ಗುಣಮಟ್ಟದ ಸೇವೆಯನ್ನು ನೀಡದಿದ್ದರೆ, ಟೋಲ್ ವಿಧಿಸಬಾರದು... ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿ ಕಾಪಾಡಲು ನಾವು ಶೀಘ್ರವೇ ಉಪಗ್ರಹ ಆಧಾರಿತ ಟೋಲಿಂಗ್ ಪ್ರಾರಂಭಿಸಬೇಕಾಗಿದೆ" ಎಂದು ಸಚಿವರು ಹೇಳಿದರು.
"ನೀವು ಉತ್ತಮ ಗುಣಮಟ್ಟದ ರಸ್ತೆಯನ್ನು ಒದಗಿಸಿದರೆ ಮಾತ್ರ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬೇಕು. ನೀವು ಗುಂಡಿಗಳು, ಕೆಸರು ಇರುವ ರಸ್ತೆಗಳಿಗೆ ಟೋಲ್ ಸಂಗ್ರಹಿಸಿದರೆ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ" ಎಂದು ಕೇಂದ್ರ ಸಚಿವರು ಹೇಳಿದರು.
ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಪರಿಸರ ವ್ಯವಸ್ಥೆಯಲ್ಲಿ GNSS-ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ETC) ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರಿ ಸ್ವಾಮ್ಯದ NHAI ಯೋಜಿಸಿದೆ. ಆರಂಭದಲ್ಲಿ(ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) RFID-ಆಧಾರಿತ ETC ಮತ್ತು GNSS-ಆಧಾರಿತ ETC ಇವೆರಡೂ ಹೈಬ್ರಿಡ್ ಮಾದರಿಯನ್ನು ಬಳಸುತ್ತವೆ ಮತ್ತು ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದರು.