ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಭಾರತ ಮೂಲದ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.
ಪನ್ನು ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ನಿಖಿಲ್ ಅವರನ್ನು ಬಂಧಿಸುವಂತೆ ಅಮೆರಿಕ ಮಾಡಿದ್ದ ಮನವಿ ಮೇರೆಗೆ ಕಳೆದ ವರ್ಷ ಅವರನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು.
ಇಂದು ಅವರನ್ನು ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಗುಪ್ತಾ ಅವರನ್ನು ಸದ್ಯ ಬ್ರೂಕ್ಲಿನ್‌ನ ಫೆಡರಲ್ ಮೆಟ್ರೋಪಾಲಿಟನ್ ವಿಚಾರಣಾ ಕೇಂದ್ರದಲ್ಲಿ ಇರಿಸಲಾಗಿದೆ. ಜೆಕ್ ಗಣರಾಜ್ಯದಲ್ಲಿ ಬಂಧನಕ್ಕೀಡಾಗಿದ್ದ ಗುಪ್ತಾ ಅವರನ್ನು ವಾರಾಂತ್ಯವೇ ಅಮೆರಿಕಕ್ಕೆ ಕರೆತರಲಾಗಿದೆ. ಸಾಮಾನ್ಯವಾಗಿ ಹಸ್ತಾಂತರಗೊಂಡವರನ್ನು ಒಂದು ದಿನದೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಹಾಗೇ ಆಗಿಲ್ಲ. ಕೆಲವು ಸೂಕ್ಷ್ಮ ತನಿಖೆ ನಡೆಯುತ್ತಿರಬಹುದು ಎಂದು ಮೂಲಗಳು ತಿಳಿಸಿವೆ.
ಪನ್ನು ಅವರನ್ನು ಕೊಲ್ಲಲು ವ್ಯಕ್ತಿಯೊಬ್ಬರಿಗೆ ಸುಪಾರಿ ನೀಡಿದ್ದ ಗುಪ್ತಾ, ಮುಂಗಡವಾಗಿ 15,000 ಡಾಲರ್ ನೀಡಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಹೆಸರು ಬಹಿರಂಗಪಡಿಸದ ಭಾರತೀಯ ಅಧಿಕಾರಿಯೊಬ್ಬರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಲಾಗಿದೆ.
ವಾರ್ಷಿಕ ಐಸಿಎಟಿ ಮಾತುಕತೆಗಾಗಿ ಅಮೆರಿಕ ಭದ್ರತಾ ಸಲಹೆಗಾರ ಜೆಕ್ ಸುಲ್ಲಿವನ್ ಭಾರತಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಭಾರತದ ಎನ್‌ಎಸ್‌ಎ ಅಜಿತ್ ಢೋಬಾಲ್ ಜೊತೆ ಅವರು ಈ ವಿಷಯ ಪ್ರಸ್ತಾಪಿಸುವ ನಿರೀಕ್ಷೆ ಇದೆ.