ನವದೆಹಲಿ: ಜಾಮೀನು ವಿಷಯಗಳನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಂದಿನ ವಿಚಾರಣೆಯಲ್ಲಿ ನಿರ್ಧರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿತು.

ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದ್ದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠವು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು.
ದೆಹಲಿ ಹೈಕೋರ್ಟ್, ಜೈನ್ ಅವರ ಜಾಮೀನು ಅರ್ಜಿಯನ್ನು ಜುಲೈ 9ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಜೈನ್ ಅವರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, 'ಆರೋಪಿಯ ಜಾಮೀನಿನ ಹಕ್ಕನ್ನು ಮಣಿಸಲು ತನಿಖಾ ಸಂಸ್ಥೆಯು ಅಪೂರ್ಣ ಜಾರ್ಜ್‌ಶೀಟ್ ಸಲ್ಲಿಸಬಹುದೇ ಎಂಬ ಗಂಭೀರ ಪ್ರಶ್ನೆ ಈ ಪ್ರಕರಣದಿಂದ ಉದ್ಭವಿಸಿದೆ' ಎಂದು ಹೇಳಿದರು.
ಕಾನೂನಿಗೆ ಸಂಬಂಧಿಸಿದ ಇಂತಹದ್ದೇ ವಿಷಯವು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಪರಿಗಣನೆಯಲ್ಲಿದ್ದು, ಜೈನ್ ಅವರ ಜಾಮೀನು ಅರ್ಜಿಯನ್ನೂ ಅದರೊಂದಿಗೆ ಜೋಡಿಸುವಂತೆ ರಜಾಕಾಲದ ಪೀಠವನ್ನು ಸಿಂಘ್ವಿ ಕೋರಿದರು.
'ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಕಾನೂನಿನ ಅಂಶವನ್ನು ಪರಿಗಣಿಸುತ್ತಿದೆ. ಹೀಗಿರುವಾಗ ದ್ವಿಸದಸ್ಯ ಪೀಠ ಅದನ್ನು ನಿಭಾಯಿಸುವುದು ಸೂಕ್ತವಲ್ಲ' ಎಂದ ಪೀಠವು, ಜಾಮೀನಿನ ವಿಷಯವನ್ನು ಹೈಕೋರ್ಟ್ ಮೊದಲಿಗೆ ನಿರ್ಧರಿಸಲಿ. ಹೈಕೋರ್ಟ್‌ನ ತೀರ್ಪು ವ್ಯತಿರಿಕ್ತ ಆಗಿದ್ದರೆ ಅರ್ಜಿದಾರರು ಪ್ರಶ್ನಿಸಬಹುದು ಎಂದು ಹೇಳಿತು.