ಕುಂಬಳೆ: ದೇಶದ ಏಕೈಕ ಸರೋವರ ಕ್ಷೇತ್ರ ಕಾಸರಗೋಡಿನ ಕುಂಬಳೆ ಸಮೀಪದ ಶ್ರೀ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಮರಿ ಮೊಸಳೆ ಬಬಿಯಾ ಮತ್ತೆ ಸುದ್ದಿಯಲ್ಲಿದೆ.
ಇದೇ ಮೊದಲಬಾರಿಗೆ ಶುಕ್ರವಾರ ಸಂಜೆ ಮೊಸಳೆ ಮರಿ ದೇಗುಲ ಪ್ರಾಂಗಣ ಏರಿದ್ದು ಗರ್ಭಗುಡಿಯ ಹೊರಗೆ ಸ್ವಚ್ಛಂದ ವಿಶ್ರಾಂತಿ ಪಡೆದಿರುವುದು ಕುತೂಹಲದೊಂದಿಗೆ ಭಕ್ತರ ಆಕರ್ಷಣೆಗೆ ಕಾರಣವಾಯಿತು. ಶನಿವಾರ ಮುಂಜಾನೆಯೂ ಮತ್ತೆ ಪ್ರಾಂಗಣ ಏರಿದ್ದು ಭಕ್ತರಲ್ಲಿ ವಿಸ್ಮಯ ಮೂಡಿಸಿದೆ.
ಅನಂತಪುರ ಕ್ಷೇತ್ರ ಏಕೈಕ ನಿರುಪದ್ರವಿ ಸಾತ್ವಿಕ ಮೊಸಳೆಯ ವಾಸದಿಂದ ಪ್ರಸಿದ್ದವಾಗಿದೆ. ಇಲ್ಲಿ ಈ ಹಿಂದೆ ಇದ್ದ ಮೊಸಳೆ "ಬಬಿಯ"ತನ್ನ 78ರ ವಯಸ್ಸಿನಲ್ಲಿ ವರ್ಷದ ಹಿಂದೆ ವಯೋಸಹಜವಾಗಿ ಬ್ರಹ್ಮಕ್ಯವಾಗಿತ್ತು. ಭಕ್ತರ ಪಾಲಿಗೆ ಕಣ್ಣಿಗೆ ಕಾಣುವ ದೇವರೆಂದೇ ಆರಾಧನೆ ಪಡೆಯುತ್ತಿದ್ದ ಮೊಸಳೆಯ ವಿಯೋಗದಿಂದ ಕ್ಷೇತ್ರವೇ ಮೂಕವಾಗಿತ್ತು. ಅನಂತರ ಭರ್ತಿ ಒಂದು ವರ್ಷದ ಬಳಿಕ ತಾನೇ ತಾನಾಗಿ ಪುಟ್ಟ ಮೊಸಳೆ ಮರಿಯೊಂದು ಈಕ್ಷೇತ್ರ ಕೆರೆಯಲ್ಲಿ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿತ್ತು. ಇದಕ್ಕೀಗ ಆರೇಳು ತಿಂಗಳ ಹರೆಯ. ಆರಂಭದಲ್ಲಿ ಭಕ್ತ ಜನರಿದ್ದರೆ ಕಾಣಿಸಿಕೊಳ್ಳದಿದ್ದ ಮೊಸಳೆಮರಿ ಈಗ ದೈವಿಕ ಪರಿಸರಕ್ಕೆ ಹೊಂದಿಕೊಂಡು ಹಿಂದಿನ ಮೊಸಳೆಯಂತೆಯೇ ಸಾತ್ವಿಕವಾಗಿ ಬದುಕುತ್ತಿದೆ.
ಕ್ಷೇತ್ರ ಸರೋವರದಲ್ಲಿ ಅತ್ತಿಂದತ್ತ ಓಡಾಡುತ್ತ ನಿರುಪದ್ರವಿಯಾಗಿ ಭಕ್ತರಿಗೆ ದರ್ಶನ ನೀಡುವ ಈ ಮರಿಮೊಸಳೆಗೂ "ಬಬಿಯ” ಎಂದೇ ನಾಮಕರಣವಾಗಿದೆ.
ಪ್ರತ್ಯಕ್ಷಗೊಂಡ ಬಳಿಕ ನೀರು ಬಿಟ್ಟು ಕದಲದೇ ಇದ್ದ ಮೊಸಳೆ ಮರಿ ಈಗ ದೇಗುಲ ವಾತಾವರಣಕ್ಕೆ ಹೊಂದಿಕೊಂಡಿದ್ದು, ಕ್ಷೇತ್ರ ಪ್ರಾಂಗಣವೇರಿ ಗರ್ಭಗುಡಿಯ ಹೊರಗೆ ಕಾವಲುಭಟನಂತೆ ವಿಶ್ರಾಂತಿ ಪಡೆಯುತ್ತಿರುವುದು ಭಕ್ತರಲ್ಲಿ ವಿಸ್ಮಯದ ಅಚ್ಚರಿ ಮೂಡಿಸಿದೆ. ಕ್ರೂರ ಪ್ರಾಣಿವರ್ಗಕ್ಕೆ ಸೇರಿದ ಮೊಸಳೆಯೊಂದು ತನ್ನ ಪ್ರಾಣಿ ಸಹಜ ಸ್ವಭಾವ ಮರೆತು ಪರಮ ಧಾರ್ಮಿಕನಂತೆ ಕ್ಷೇತ್ರವಾಸಿಯಾಗಿ ಸಾತ್ವಿಕತೆಯಿಂದ ಬದುಕುತ್ತಿರುವುದೇ ಇಲ್ಲಿನ ವಿಸ್ಮಯ. ಈ ಕಾರಣದಿಂದಲೇ ಮೊಸಳೆ ಮರಿಯನ್ನು ಅನಂತಪುರ ಶ್ರೀ ಪದ್ಮನಾಭ ಸ್ವಾಮೀ ದೇವರ ಪ್ರತೀಕವಾಗಿ ಭಕ್ತರು ಆರಾಧಿಸುತ್ತಾರೆ.
ಅಭಿಮತ:
ಮರಿ ಬಬಿಯಾ ಇದೇ ಮೊದಲ ಬಾರಿಗೆ ಕ್ಷೇತ್ರಾಂಗಣವೇರಿ ಹೊಸ ಚರ್ಚೆಯೊಂದಿಗೆ ಕಾಣಿಸಿರುವುದು ಅಚ್ಚರಿಮೂಡಿಸಿದೆ. ನಿರುಪದ್ರವಿಯಾದ ದೇವರ ಮೊಸಳೆ ಇಲ್ಲಿಯ ವಾತಾವರಣಕ್ಕೆ ಹೊಂದಿ ನೀರಿಂದ ಮೇಲೆಬಂದು ದೇವರ ನಡೆಯೆದುರು ದರ್ಶನ ನೀಡಿರುವುದು ನಿಜಕ್ಕೂ ಕುತೂಹಲ ಮೂಡಿಸಿದೆ. ಭಗವಂತನ ಶಕ್ತಿ-ಕಾರಣಿಕಕ್ಕೆ ಇದು ಸಾಕ್ಷಿ.
-ಎಂ.ವಿ.ಮಹಾಲಿಂಗೇಶ್ವರ ಭಟ್
ಅನಂತಪುರ ಶ್ರೀಕ್ಷೇತ್ರದ ಜೀಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ