ನವದೆಹಲಿ: ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಮೇಲೆ ನಡೆದ ಹಲ್ಲೆಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಮೇಲೆ ಹಲ್ಲೆ ನಡೆದಿದ್ದು, ಸಣ್ಣ ಪ್ರಮಾಣದ ಗಾಯ ಆಗಿದೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. 'ಕುತ್ತಿಗೆ ಸಣ್ಣದಾಗಿ ಉಳುಕಿರುವುದು ಹೊರತುಪಡಿಸಿದರೆ ಪ್ರಧಾನಿ ಆರೋಗ್ಯವಾಗಿಯೇ ಇದ್ದಾರೆ. ಆದರೆ ಘಟನೆಯಿಂದ ಅವರು ಆಘಾತಗೊಂಡಿದ್ದಾರೆ' ಎಂದು ಹೇಳಿದೆ. ಮೆಟೆ ಅವರು ಶನಿವಾರದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಶುಕ್ರವಾರ ಸಂಜೆ ಕೋಪನ್‌ಹೇಗನ್ ಸ್ಕ್ವೇರ್‌ನಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಅವರನ್ನು ಬಲವಾಗಿ ತಳ್ಳಿದ್ದ. ಹಲ್ಲೆಗೈದ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಯ ಉದ್ದೇಶ ಏನು ಮತ್ತು ಆತ ಆಯುಧವನ್ನು ಹೊಂದಿದ್ದನೇ ಎಂಬುದರ ಬಗ್ಗೆ ಪೊಲೀಸರು ಅಥವಾ ಪ್ರಧಾನಿ ಕಚೇರಿ ಯಾವುದೇ ಹೇಳಿಕೆ ನೀಡಿಲ್ಲ.