HEALTH TIPS

ಒಂದೇ ಕಂಪನಿಯ ಏಕಸ್ವಾಮ್ಯ ಸೃಷ್ಟಿಯಾಗದಂತೆ ನಿಗಾವಹಿಸಿ: ಜೈರಾಂ ರಮೇಶ್

        ವದೆಹಲಿ: ಕಾರ್ಪೊರೇಟ್ ಕಂಪನಿಗಳ ನಡುವಿನ ಸ್ಪರ್ಧೆಯನ್ನು ಹತ್ತಿಕ್ಕದಂತೆ ನೋಡಿಕೊಳ್ಳುವ ಹೊಣೆಯು ಸರ್ಕಾರದ ಮೇಲಿದೆ ಎಂದು ಕಾಂಗ್ರೆಸ್ ಪಕ್ಷವು ಶನಿವಾರ ಹೇಳಿದೆ.

         ಅಲ್ಲದೆ, ಕಾರ್ಪೊರೇಟ್‌ ವಲಯದಲ್ಲಿ ಕೆಲವೇ ಕಂಪನಿಗಳ ಹಿಡಿತ ಸೃಷ್ಟಿಯಾಗದಂತೆ ಅಥವಾ ಕಂಪನಿಯೊಂದು ಏಕಸ್ವಾಮ್ಯ ಸ್ಥಾಪಿಸದಂತೆ, ಕಂಪನಿಗಳ ಸ್ವಾಧೀನ ಪ್ರಕ್ರಿಯೆಯು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ಆಗುವಂತೆ ನೋಡಿಕೊಳ್ಳುವ ಹೊಣೆ ಕೂಡ ಸರ್ಕಾರದ್ದು ಎಂದು ಅದು ಹೇಳಿದೆ.

ರಾಜಕೀಯ ಅಧಿಕಾರ ಕೇಂದ್ರದಲ್ಲಿ ಇರುವವರ ಜೊತೆಗಿನ ಸಂಪರ್ಕವನ್ನು ಯಾರೂ ಅನುಚಿತವಾಗಿ ಬಳಕೆ ಮಾಡದಂತೆ ಕೂಡ ಸರ್ಕಾರವು ಖಾತರಿಪಡಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಹೇಳಿದ್ದಾರೆ.

           ಅದಾನಿ ಸಮೂಹವು ಪೆನ್ನಾ ಸಿಮೆಂಟ್ಸ್ ಕಂಪನಿಯನ್ನು ಸ್ವಾಧಿನಪಡಿಸಿಕೊಂಡ ನಂತರ ರಮೇಶ್ ಅವರು ಈ ಮಾತು ಹೇಳಿದ್ದಾರೆ.

             'ಕಾಲಾನುಕ್ರಮದಲ್ಲಿ ಏನಾಯಿತು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ: ಸೆಪ್ಟೆಂಬರ್‌ 2022ರಲ್ಲಿ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಕಂಪನಿಗಳನ್ನು ಅದಾನಿ ಸ್ವಾಧೀನಪಡಿಸಿಕೊಂಡು ದೇಶದ ಎರಡನೆಯ ಅತಿದೊಡ್ಡ ಸಿಮೆಂಟ್ ಕಂಪನಿಯಾಯಿತು. 2023ರ ಆಗಸ್ಟ್‌ನಲ್ಲಿ, ಸಂಘಿ ಇಂಡಸ್ಟ್ರೀಸ್‌ಅನ್ನು ಅದಾನಿ ಸ್ವಾಧೀನಪಡಿಸಿಕೊಂಡಿತು. 2024ರ ಜೂನ್‌ನಲ್ಲಿ ಪೆನ್ನಾ ಸಿಮೆಂಟ್ಸ್ ಕಂಪನಿಯನ್ನು ಅದಾನಿ ಸ್ವಾಧೀನಕ್ಕೆ ತೆಗೆದುಕೊಂಡಿತು, ಇದು ದಕ್ಷಿಣ ಭಾರತದಲ್ಲಿಯೂ ಗಣನೀಯ ಮಾರುಕಟ್ಟೆ ಪಾಲನ್ನು ಒದಗಿಸಿದೆ' ಎಂದು ಜೈರಾಂ ಹೇಳಿದ್ದಾರೆ.

           'ಮುಂದೆ: ಸೌರಾಷ್ಟ್ರ ಸಿಮೆಂಟ್‌, ವದರಾಜ್ ಸಿಮೆಂಟ್ ಮತ್ತು ಜೈಪ್ರಕಾಶ್ ಅಸೋಸಿಯೇಟ್ಸ್‌ ಕಂಪನಿಯ ಸಿಮೆಂಟ್‌ ವಹಿವಾಟುಗಳ ಸ್ವಾಧೀನಕ್ಕೆ ಅದಾನಿ ಮುಂದಾಗಿದೆ' ಎಂದು ರಮೇಶ್ ಅವರು ಎಕ್ಸ್‌ ಮೂಲಕ ಹೇಳಿದ್ದಾರೆ.

          ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರ ಮಾತನ್ನು ಉಲ್ಲೇಖಿಸಿ ರಮೇಶ್ ಅವರು, ಅದಾನಿ ಸಮೂಹ ಸೇರಿದಂತೆ ಐದು ಬೃಹತ್ ಉದ್ಯಮ ಸಮೂಹಗಳು ಸಿಮೆಂಟ್ ವಲಯ ಸೇರಿದಂತೆ 40 ವಲಯಗಳಲ್ಲಿ ಏಕಸ್ವಾಮ್ಯ ಸ್ಥಾಪಿಸುತ್ತಿವೆ ಎಂದು ಖ್ಯಾತ ಹಣಕಾಸು ಅರ್ಥಶಾಸ್ತ್ರಜ್ಞ ಸಾಬೀತುಪಡಿಸಿದ್ದರು ಎಂದು ಕೂಡ ರಮೇಶ್ ಹೇಳಿದ್ದಾರೆ.

           'ಏಕಸ್ವಾಮ್ಯವು ಹೆಚ್ಚಾಗುತ್ತಿರುವುದಕ್ಕೂ ಭಾರತದ ಅಸ್ಥಿರ ಆರ್ಥಿಕ ಬೆಳವಣಿಗೆ, ನಿರುದ್ಯೋಗದ ಬಿಕ್ಕಟ್ಟು ಹಾಗೂ ಭಾರಿ ಹಣದುಬ್ಬರ ಪ್ರಮಾಣಕ್ಕೂ ಸಂಬಂಧ ಇದೆ. 2015ರಲ್ಲಿ ಜನಸಾಮಾನ್ಯರು ಸರಕುಗಳಿಗಾಗಿ ₹100 ವಿನಿಯೋಗಿಸಿದಾಗ ಅದರಲ್ಲಿ ಉದ್ಯಮದ ಮಾಲೀಕನಿಗೆ ₹18 ಲಾಭದ ರೂಪದಲ್ಲಿ ಸಂದಾಯವಾಗುತ್ತಿತ್ತು. 2021ರಲ್ಲಿ ಉದ್ಯಮದ ಮಾಲೀಕನಿಗೆ ಲಾಭದ ರೂಪದಲ್ಲಿ ₹36 ಸಿಗುತ್ತಿದೆ' ಎಂದು ರಮೇಶ್ ಹೇಳಿದ್ದಾರೆ.

           'ಕಂಪನಿಗಳು ವಿಸ್ತರಣೆ ಕಾಣಬೇಕು. ಆದರೆ, ಅದೇ ಸಮಯದಲ್ಲಿ, ಸ್ಪರ್ಧೆಯನ್ನು ಹತ್ತಿಕ್ಕದಂತೆ ನೋಡಿಕೊಳ್ಳುವ ಹೊಣೆಯು ಸರ್ಕಾರದ ಮೇಲೆ ಇದೆ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries