ಮುಂಬೈ: ಮಳೆ ಬಂದರೆ ನದಿ-ತೊರೆ ನೀರು ಹಳದಿ ಬಣ್ಣಕ್ಕೆ ತಿರುಗುವುದನ್ನು ಕಾಣುತ್ತೇವೆ. ಆದರೆ ಮಹಾರಾಷ್ಟ್ರದ ಧಾರಶಿವ ಜಿಲ್ಲೆಯ ನದಿಯೊಂದರಲ್ಲಿ ಮಳೆ ನೀರು ನೀಲಿ ಬಣ್ಣಕ್ಕೆ ತಿರುಗಿ ಹರಿಯಲಾರಂಭಿಸಿದೆ. ಈ ವಿಸ್ಮಯ ನೋಡಲು ಜನಜಾತ್ರೆ ಸೇರುತ್ತಿದೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದು ವೈರಲ್ ಆಗುತ್ತಿದೆ.
ನದಿಯಲ್ಲಿ ನೀಲಿ ನೀರು ಹರಿಯುತ್ತಿರುವ ವೀಡಿಯೊವನ್ನು ಎಕ್ಸ್ ನಲ್ಲಿ ಜಿತೇಂದ್ರ ಅಲಿಯಾಸ್ ಜಿತೇಂದದ್ರಜಾವರ್ ಖಾತೆಯಿಂದ 'ಧಾರಶಿವಮಧೀಲ ಶೆತಾತ ನಿಂತೇ ಪಾಣಿ ಯೇತ ಆಹೇ(ಧಾರಶಿವ್ನಲ್ಲಿ ಹೊಲಗಳಿಗೆ ನೀಲಿ ನೀರು ಬರುತ್ತಿದೆ' ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಜನರು ಈಗ ನೀಲಿ ನೀರಿನ ವಿಸ್ಮಯ ನೋಡಲು ಶುರು ಮಾಡಿದ್ದಾರೆ.
ಧಾರಶಿವ ಜಿಲ್ಲಾಡಳಿತಕ್ಕೆ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. 'ನೀಲಿ ಬಣ್ಣವು ನೈಸರ್ಗಿಕ ಘಟನೆಯಲ್ಲ, ಯಾರದೋ ಅಚಾತುರ್ಯದಿಂದ ಬಣ್ಣದ ಬಾಕ್ಸ್ ಮಳೆಯ ನೀರಿಗೆ ಬಿದ್ದಿದ್ದು, ನೀರಿನ ಬಣ್ಣ ಬದಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಕಾರಣ ಬಣ್ಣದ ಬಾಕ್ಸ್‌ಗಳಲ್ಲಿದ್ದ ಬಣ್ಣ ಮಳೆನೀರಿಗೆ ಮಿಶ್ರಣಗೊಂಡ ಪರಿಣಾಮ ನೀಲಿ ನೀರು ಹರಿಯುತ್ತಿದೆ ಎಂದು ತುಳಜಾಪುರ ತಹಸೀಲ್ದಾರ್ ತಿಳಿಸಿದ್ದಾರೆ. ಆದರೆ ಬಣ್ಣದ ಬಾಕ್ಸ್ಗಳು ಎಲ್ಲಿದ್ದವು? ಯಾರವು ಎಂಬ ಬಗ್ಗೆ ಏನನ್ನೂ ಹೇಳಿಲ್ಲ. ಹೀಗಾಗಿ ನೀರಿನ ಬಣ್ಣ ಬದಲಾಗಿರುವುದು ಇನ್ನೂ ನಿಗೂಢವಾಗಿಯೇ ಇದೆ.