ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ. ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಭಯದಿಂದ, ಜನರು ತಮ್ಮ ಮನೆಗಳಿಂದ ಹೊರಗಿಳಿಯಲು ಹೆದರುತಿದ್ದಾರೆ.
ಇದರಿಂದಾಗಿ ವಿದ್ಯಾರ್ಥಿಗಳು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಶುಕ್ರವಾರ ಎರಡನೇ ವಾರ್ಡ್ ತೂಮಿನಾಡಿನಲ್ಲಿ ಕರ್ನಾಟಕದಿಂದ ದ್ವಿಚಕ್ರ ವಾಹನದಲ್ಲಿ ಬಂದ ಬ್ಯಾಂಕ್ ಪಿಗ್ಮಿ ಸಂಗ್ರಹಗಾರನ ಮೇಲೆ ಜನರು ನೋಡನೋಡುತ್ತಿದ್ದಂತೆ ಶ್ವಾನ ತಂಡ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಬಳಿಕ ಸ್ಥಳೀಯರು ನಾಯಿಯಿಂದ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಹಿಂದೆಯೂ ಇದೇ ಪರಿಸರದಲ್ಲಿ ಶ್ವಾನ ತಂಡ ಮದ್ರಸಕ್ಕೆ ತೆರಳುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿತ್ತು. ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಸಂಬಂಧಪಟ್ಟವರು ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂದು ಸ್ಥಳೀಯರು ಆರೋಪಿಸುತಿದ್ದಾರೆ.