HEALTH TIPS

ಉತ್ತರ ಪ್ರದೇಶ : ಬಿಜೆಪಿಗೆ ಸಿಗದ ಬಾಲರಾಮನ ಕೃಪೆ: ಕಮಾಲ್‌ ಮಾಡಿದ ಯುಪಿ ಕೆ ಲಡ್ಕೆ

          ವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ, 'ಅಬ್‌ ಕಿ ಬಾರ್‌, ಚಾರ್‌ ಸೌ ಪಾರ್' ಎಂಬ ಘೋಷಣೆಯನ್ನು ದೇಶದ ಉದ್ದಗಲಕ್ಕೂ ಮೊಳಗಿಸಿ, ಚುನಾವಣಾ ಕಣವನ್ನು ರಂಗೇರಿಸಿತ್ತು. 400ಕ್ಕೂ ಅಧಿಕ ಸ್ಥಾನ ಪಡೆಯುವ ಮೂಲಕ ಪ್ರಚಂಡ ಜಯದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರುವ ಎನ್‌ಡಿಎ ಉಮೇದಿಗೆ 'ಇಂಡಿಯಾ' ಮೈತ್ರಿಕೂಟ ತಣ್ಣೀರೆರೆಚಿದೆ.

          ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗುವಂತೆ ಮಾಡಿರುವ ಕಾಂಗ್ರೆಸ್‌ ಹಾಗೂ ಅದು ಭಾಗವಾಗಿರುವ 'ಇಂಡಿಯಾ' ಮೈತ್ರಿಕೂಟ, ಬಿಜೆಪಿಯನ್ನು 250ಕ್ಕೂ ಕಡಿಮೆ ಸ್ಥಾನಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿವೆ. 'ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌' ಎನ್ನುವ ಮೂಲಕ 400ರ ಗಡಿ ದಾಟುವ ಕನಸು ಕಂಡಿದ್ದ ಎನ್‌ಡಿಎ, 300 ಸ್ಥಾನಗಳನ್ನೂ ದಾಟದಂತೆ ಅದರ ನಾಗಾಲೋಟಕ್ಕೆ ತಡೆ ಒಡ್ಡಿವೆ.

           ಹತ್ತು ವರ್ಷಗಳ ನಂತರ, ಕಾಂಗ್ರೆಸ್‌ ತನ್ನ ಚುನಾವಣಾ ಸಾಧನೆಯನ್ನು ಅಚ್ಚರಿ ಎಂಬಂತೆ ಸುಧಾರಿಸಿಕೊಂಡಿದೆ.

            ಉತ್ತರ ಪ್ರದೇಶವನ್ನು ಯಾರೋ ಗೆಲ್ಲುತ್ತಾರೋ ಅವರಿಗೆ ದೆಹಲಿ ಗದ್ದುಗೆ ಎಂಬುದು ಭಾರತದ ಚುನಾವಣಾ ರಾಜಕೀಯದ ಅಲಿಖಿತ ನಿಯಮ. ಹಿಂದಿನ ಎಲ್ಲ ಸಾರ್ವತ್ರಿಕ ಚುನಾವಣೆಗಳನ್ನು ಗಮನಿಸಿದಾಗ ಈ ಅಂಶ ಮನದಟ್ಟಾಗುತ್ತದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 80 ಲೋಕಸಭಾ ಕ್ಷೇತ್ರಗಳಿರುವುದೇ ಇದಕ್ಕೆ ಕಾರಣ.

           2014ರ ಚುನಾವಣೆಗೆ ಹೋಲಿಸಿದಾಗ, ಉತ್ತರ ಪ್ರದೇಶದಲ್ಲಿ ಎನ್‌ಡಿಎ ಗಮನಾರ್ಹ ಸಂಖ್ಯೆಯ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದರ ಜೊತೆಗೆ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕದಲ್ಲಿಯೂ ಅದರ ಸಾಧನೆ ಕಳಪೆಯಾಗಿದೆ. ಈ ಎಲ್ಲ ಕಾರಣಗಳಿಂದ ಸರಳ ಬಹುಮತಕ್ಕೆ ಬೇಕಾದ 272ರ ಗಡಿ ದಾಟುವಲ್ಲಿಯೂ ಎನ್‌ಡಿಎ ಸಫಲವಾಗಿಲ್ಲ.

             'ಇಂಡಿಯಾ' ಒಕ್ಕೂಟ ರೂಪಿಸಿದ್ದ ತಂತ್ರಗಾರಿಕೆ ಫಲ ನೀಡಿದೆ ಎಂಬುದನ್ನು ಈ ಫಲಿತಾಂಶ ಹೇಳುತ್ತದೆ.

            ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ರೂಪಿಸುವ ಉದ್ದೇಶದಿಂದ ಕಳೆದ ವರ್ಷ 'ಇಂಡಿಯಾ' ಒಕ್ಕೂಟ ಮೈದಳೆದ ಸಂದರ್ಭದಲ್ಲಿ, ಅದರ ಭಾಗವಾಗಲು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮೀನಮೇಷ ಎಣಿಸಿದ್ದರು. ಇನ್ನೇನು, ಸಮಾಜವಾದಿ ಪಕ್ಷ 'ಇಂಡಿಯಾ' ಒಕ್ಕೂಟ ಸೇರದೇ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದೇ ಹೇಳಲಾಗುತ್ತಿತ್ತು.

             ಆದರೆ, ಕೊನೆಗೆ ಅವರು 'ಇಂಡಿಯಾ' ಒಕ್ಕೂಟ ಸೇರಲು ನಿರ್ಧರಿಸಿದ್ದು, ಉತ್ತರ ಪ್ರದೇಶದಲ್ಲಿ ಹೊಸ ಸಮೀಕರಣಕ್ಕೆ ಕಾರಣವಾಯಿತು. ಈ ಒಕ್ಕೂಟದ ಸಾಧನೆಗೆ ಕಾರಣವಾದ ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು

            ಕಮಾಲ್‌ ಮಾಡಿದ 'ಯುಪಿ ಕೆ ಲಡ್ಕೆ': ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಜಂಟಿಯಾಗಿ ಪ್ರಚಾರ ಕಾರ್ಯ ಶುರುಮಾಡಿದರು. ಪ್ರಚಾರದುದ್ದಕ್ಕೂ, ಬಿಜೆಪಿ ಪಾಳಯ ಅವರನ್ನು 'ಯುಪಿ ಕೆ ಲಡ್ಕೆ' ಎಂದು ಮೂದಲಿಸಿತ್ತು. ಆದರೆ, ಈ ಜೋಡಿ 'ಇಂಡಿಯಾ' ಒಕ್ಕೂಟಕ್ಕೆ ಹೆಚ್ಚು ಸ್ಥಾನಗಳನ್ನು ತಂದುಕೊಡುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

                'ಕೃಪೆ' ತೋರದ ಬಾಲರಾಮ: ಅಯೋಧ್ಯೆಯಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ, ತನ್ನ ಗೆಲುವು ನಿಶ್ಚಿತ ಎಂದೇ ಎನ್‌ಡಿಎ ವಿಶ್ವಾಸದಿಂದ ಬೀಗುತ್ತಿತ್ತು. 'ಜೋ ರಾಮ್‌ ಕೊ ಲಾಯೆ ಹೈ, ಹಮ್‌ ಉನ್‌ಕೊ ಲಾಯೆಂಗೆ' (ಯಾರು ರಾಮನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೋ ಅವರನ್ನು ಅಧಿಕಾರಕ್ಕೆ ತರುತ್ತೇವೆ) ಎಂಬ ಘೋಷಣೆಯನ್ನು ಬಿಜೆಪಿ ರಚಿಸಿತ್ತು. ಬಾಲ ರಾಮನ ಗುಡಿ ಇರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಗೆಲುವಿನ ದಡ ಮುಟ್ಟಲು ವಿಫಲವಾಗಿ, ಭಾರಿ ಮುಖಭಂಗ ಅನುಭವಿಸಿದೆ. ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ ಪ್ರಸಾದ್‌ ವಿರುದ್ಧ ಬಿಜೆಪಿಯ ಲಲ್ಲು ಸಿಂಗ್‌ 48,104 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಪ್ರಭಾವ ಬೀರದ ಬಿಎಸ್‌ಪಿ: ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷ ಈ ಬಾರಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ.

              ಟಿಎಂಸಿ ಸೇರಿದಂತೆ ಮೈತ್ರಿಕೂಟದ ಕೆಲ ಅಂಗಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿ ಅಪಸ್ವರ ಕೇಳಿಬಂದಿತ್ತು. ಅವುಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿದ್ದು ಕಾಂಗ್ರೆಸ್‌ನ ತಂತ್ರಗಾರಿಕೆಗೆ ಹಿಡಿದ ಕನ್ನಡಿ.

            ಲೋಕಸಭಾ ಚುನಾವಣೆಯೂ ಮುನ್ನ, ಮಣಿಪುರದಿಂದ ಮುಂಬೈ ವರೆಗ ಕಾಂಗ್ರೆಸ್‌ 'ಭಾರತ್‌ ಜೋಡೊ ನ್ಯಾಯ ಯಾತ್ರೆ' ಹಮ್ಮಿಕೊಂಡಿತ್ತು. ಈ ಯಾತ್ರೆ ಸಹ 'ಇಂಡಿಯಾ' ಒಕ್ಕೂಟದ ಪರ ಮತ ಪ್ರಮಾಣ ಹೆಚ್ಚಲು ಕಾರಣವಾದ ಅಂಶಗಳಲ್ಲಿ ಒಂದು ವಿಶ್ಲೇಷಿಸಲಾಗುತ್ತಿದೆ.

              ಅಲ್ಲದೇ, ತಮ್ಮ ಸರ್ಕಾರ ಬಂದ ನಂತರ ಜಾತಿ ಗಣತಿ ನಡೆಸಲಾಗುವುದು ಎಂಬ ಘೋಷಣೆ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ, ಮೀಸಲಾತಿ ಪದ್ಧತಿಯನ್ನು ನಾಶ ಮಾಡುತ್ತದೆ ಎಂಬ ಸಂಕಥನ ರೂಪಿಸಿ, ಜನರಿಗೆ ತಲುಪಿಸುವಲ್ಲಿಯೂ 'ಇಂಡಿಯಾ' ಮೈತ್ರಿಕೂಟ, ಅದರಲ್ಲೂ ಕಾಂಗ್ರೆಸ್‌ ಯಶ ಕಂಡಿದೆ ಎನ್ನಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries