ನ್ಯೂಯಾರ್ಕ್: ಇಸ್ರೇಲ್‌ನ ಭದ್ರತೆ ಮತ್ತು ಒಗ್ಗಟ್ಟನ್ನು ಕೇಂದ್ರೀಕರಿಸಿ ಈ ಬಾರಿ ನ್ಯೂಯಾರ್ಕ್ ಸಿಟಿಯಲ್ಲಿ ಭಾನುವಾರ ನಡೆಯಲಿರುವ 'ಇಸ್ರೇಲ್ ಡೇ ಆನ್ ಫಿಫ್ತ್' ಪರೇಡ್‌ನಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಗಾಜಾದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಇಸ್ರೇಲ್ ಭದ್ರತೆಗೆ ಒತ್ತು ನೀಡಲು ಸಂಘಟಕರು ನಿರ್ಧರಿಸಿದ್ದಾರೆ.
ಈ ಹಿಂದೆ 'ಸೆಲೆಬ್ರೇಟ್ ಇಸ್ರೇಲ್' ಹೆಸರಿನಲ್ಲಿ ಪರೇಡ್ ನಡೆಸಲಾಗಿತ್ತು. ಈ ವರ್ಷ ಇಸ್ರೇಲಿ ಒತ್ತೆಯಾಳುಗಳು ಸುರಕ್ಷಿತವಾಗಿ ಹಿಂದಿರುಗುವಂತಾಗಲಿ ಎಂದು ಪ್ರಾರ್ಥಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
ಮ್ಯಾನ್‌ಹ್ಯಾಟನ್‌ನ 57ನೇ ರಸ್ತೆಯಿಂದ 74ನೇ ರಸ್ತೆಯವರೆಗಿನ ಐದನೇ ಅವೆನ್ಯೂ ಮಾರ್ಗದ ಮೂಲಕ ಮೆರವಣಿಗೆ ನಡೆಯಲಿದೆ. ಇದು ಇಸ್ರೇಲಿಗಳ ಒಗ್ಗಟ್ಟು, ಶಕ್ತಿ ಮತ್ತು ಪುಟಿದೇಳುವ ಸಾಮರ್ಥ್ಯವನ್ನು ಕೇಂದ್ರೀಕರಿಸಿ ನಡೆಯುವ ಪರೇಡ್ ಆಗಿದೆ ಎಂದು ಯಹೂದಿ ಸಮುದಾಯ ಸಂಬಂಧಗಳ ಪರಿಷತ್ತಿನ ಸಿಇಒ ಮಾರ್ಕ್ ಟ್ರೇಗರ್ ಹೇಳಿದ್ದಾರೆ.
ಪರೇಡ್ ಬೆಳಿಗ್ಗೆ 11.30ಕ್ಕೆ ಆರಂಭವಾಗಲಿದ್ದು, ಇಸ್ರೇಲ್‌ನ ಕೆಲ ಗಣ್ಯರು, ಸೆಲೆಬ್ರಿಟಿಗಳು ಮತ್ತು ಒತ್ತೆಯಾಳುಗಳ ಕುಟುಂಬದ ಕೆಲವರು ಸೇರಿದಂತೆ ಸಹಸ್ರಾರು ಜನರು ಭಾಗವಹಿಸುವ ಸಾಧ್ಯತೆ ಇದೆ.