ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವು ಗೆಲುವನ್ನು ಸಾಧಿಸುವ ಮೂಲಕ ತಾನು ಉದ್ದೇಶಿಸಿರುವ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದೆ. ಇನ್ನು ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಾಕಿಕೊಂಡಿರುವ 'ಮೋದಿ ಕಾ ಪರಿವಾರ್' ಟ್ಯಾಗ್ ಅನ್ನು ತೆಗೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
'ಮೋದಿ ಅವರಿಗೆ ತಮ್ಮದೇ ಆದ ಕುಟುಂಬವಿಲ್ಲ' ಎಂದು ವಿರೋಧ ಪಕ್ಷದ ನಾಯಕ ಲಾಲು ಪ್ರಸಾದ್ ಯಾದವ್ ವಾಗ್ದಾಳಿ ನಡೆಸಿದ ನಂತರ ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಮಾರ್ಚ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ತಮ್ಮನ್ನು 'ಮೋದಿ ಕಾ ಪರಿವಾರ್' (ಮೋದಿ ಕುಟುಂಬ) ಎಂದು ಹಾಕಿಕೊಳ್ಳುವ ಮೂಲಕ ಅಭಿಯಾನ ಆರಂಭಿಸಿದ್ದರು. ಈ ಮೂಲಕ ಭಾರತದ ಜನರೇ ನನ್ನ ಕುಟುಂಬ ಎಂದು ಪ್ರಧಾನಿ ತಿರುಗೇಟು ನೀಡಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, 'ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ 'ಮೋದಿ ಕಾ ಪರಿವಾರ್' ಎಂದು ಟ್ಯಾಗ್ ಹಾಕಿಕೊಂಡಿದ್ದರು. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡೆ. ಭಾರತದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಗೆ ಬಹುಮತವನ್ನು ನೀಡಿದ್ದಾರೆ. ಇದು ಒಂದು ರೀತಿಯ ದಾಖಲೆ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶ ನೀಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
'ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸುವುದರೊಂದಿಗೆ, ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿನ 'ಮೋದಿ ಕಾ ಪರಿವಾರ್' ಟ್ಯಾಗ್ ಅನ್ನು ತೆಗೆಯುವಂತೆ ವಿನಂತಿಸುತ್ತೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರು ಬದಲಾಗಬಹುದು, ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುವ ಒಂದು ಪರಿವಾರದ ನಮ್ಮ ಬಂಧವು ದೃಢವಾಗಿ ಮುರಿಯದೆ ಉಳಿಯಲಿದೆ' ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ.
ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯ ಡಿಸ್‌ಪ್ಲೇ ಫೋಟೊ ಸಹ ಬದಲಾಯಿಸಿದ್ದಾರೆ.