ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣ ಪುನರ್ ನವೀಕರಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಪ್ರದೇಶ ಮಳೆ ನೀರು ಹಾಗೂ ಕೆಸರುಮಯಗೊಂಡು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹಳೆಯ ಪ್ಲಾಟ್‍ಫಾರ್ಮ್‍ಗಳನ್ನು ಎತ್ತರಗೊಳಿಸುವ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ನವೀಕರಣದ ಭಾಗವಾಗಿ ಇಕ್ಕಡೆಗಳಲ್ಲಿರುವ ಫ್ಲಾಟ್ ಫಾರ್ಮ್ ಗಳನ್ನು ಕೆಡವಿ ಮಣ್ಣು ಹಾಕಲಾಗುತ್ತಿದೆ. ಕಾಮಗಾರಿ ಪೂರ್ಣ ಗೊಳ್ಳದ ಕಾರಣ ಮಳೆ ನೀರು ಹಾಗೂ ಕೆಸರು ತುಂಬಿ ಹೋಗಿ ಕೆಸರುಗದ್ದೆಯಾಗಿದೆ.
ಪ್ರಯಾಣಿಕರಿಗೆ ನಿಲ್ಲಲು ಅಥವಾ ಕೂರಲು ಸ್ಥಳ ಇಲ್ಲದಂತಾಗಿದೆ. ಪೂರ್ವ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಹೋಗುವವರು ಹಾಗೂ ಬರುವರಿಗೂ ಕೂಡಾ ಸಮಸ್ಯೆ ಎದುರಾಗಿದೆ. ರೈಲ್ವೇ ಮೇಲ್ಸೇತುವೆ ಮೂಲಕ ಆಗಮಿಸುವವರು ಕೆಸರಿಗೆ ಕಾಲಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಾಮಗಾರಿ ಆರಂಭಗೊಂಡು ತಿಂಗಳುಗಳೇ ಕಳೆದರೂ ಕೆಲಸಗಳು ವೇಗತೆಯನ್ನು ಪಡೆದಿಲ್ಲವೆಂಬುದಾಗಿ ಜನರು ಆಡಿ ಕೊಳ್ಳುತಿದ್ದಾರೆ.
ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ರಿಗೆ ನಿರ್ಮಿಸಲಾಗುತ್ತಿರುವ ಕಚೇರಿಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ರೈಲ್ವೇ ಪ್ರಯಾಣಿಕರಿಗೆ ಮೇಲ್ಸೇತುವೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ತಲುಪಲು ಮೇಲ್ಸೇತುವೆಯನ್ನು ಉದ್ದವನ್ನು ಇತ್ತೀಚೆಗೆ ಹೆಚ್ಚಿಸಲಾಗಿದೆ. ಮಳೆಗಾಲದಲ್ಲಿ ನೀರು ಕಟ್ಟಿನಿಲ್ಲುವ ಹಿನ್ನೆಲೆಯಲ್ಲಿ ಈ ಮೇಲ್ಸೇತುವೆ ಪ್ರಯಾಣಿಕರಿಗೆ ಹಾಗೂ ಪರಿಸರವಾಸಿಗಳಿಗೆ ಹೆಚ್ಚು ಸಹಾಯಕವಾಗಲಿದೆ.
ಹಳೆಯ ಫ್ಲಾಟ್ ಫಾರ್ಮ್ ಕೆಡವಿ ಎತ್ತರಗೊಳಿಸಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮೊದಲು ಹಳಿಯಿಂದ 50 ಸೆ.ಮೀ. ಎತ್ತರವಿದ್ದ ಫ್ಲಾಟ್ ಫಾರ್ಮನ್ನು ಈಗ 85 ಸೆ.ಮೀ ಗೆ ಎತ್ತರಗೊಳಿಸಲಾಗಿದೆ. ಮೇಲ್ಭಾಗವನ್ನು ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಪಶ್ಚಿಮ ಭಾಗದಲ್ಲಿ ಫ್ಲಾಟ್ ಫಾರ್ಮ್ ಗೆ ಸಂಬಂಧಿಸಿ ಆವರಣಗೋಡೆ ಕೂಡಾ ನಿರ್ಮಾಣವಾಗುತ್ತಿದೆ. 500 ಮೀಟರ್ ಉದ್ದವಿದ್ದ ಫ್ಲಾಟ್ ಫಾರ್ಮ್ ಇನ್ನು 700 ನಷ್ಟು ಹೆಚ್ಚಳಗೊಳ್ಳಲಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ವೇಗತೆ ಹೆಚ್ಚಿಸಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರ ಸಂಕಷ್ಟವನ್ನು ದೂರೀಕರಿಸುವಂತೆ ಪ್ರಯಾಣಿಕರು ಹಾಗೂ ಊರವರು ಆಗ್ರಹಿಸಿದ್ದಾರೆ.
ಅಭಿಮತ: ರೈಲ್ವೇ ಸ್ಟೇಶನ್ ಪರಿಸರ ಮಳೆ ನೀರು ಹಾಗೂ ಕೆಸರು ತುಂಬಿ ಪ್ರಯಾಣಿಕರಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕೆಸರನ್ನು ಮೆಟ್ಟದೆ ರೈಲನ್ನು ಹತ್ತಲು-ಇಳಿಯಲು ಸಾಧ್ಯವಾಗದ ಸ್ಥಿತಿ. ಪುನರ್ ನವೀಕರಣದ ಕಾಮಗಾರಿಯನ್ನು ವಿಳಂಬಗೊಳಿಸದೆ ಶೀಘ್ರ ಮುಗಿಸಬೇಕಾಗಿದೆ.
ಅಬ್ದುಲ್ ರಹ್ಮಾನ್ ಉದ್ಯಾವರ
ಪ್ರ. ಕಾರ್ಯದರ್ಶಿ ಮಂಜೇಶ್ವರ ಗ್ರಾಹಕರ ವೇದಿಕೆ