ತಿರುವನಂತಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 'ಕಾಂಗ್ರೆಸ್ ಪಕ್ಷದ ತಾಯಿ' ಎಂದ ನನ್ನ ಹೇಳಿಕೆಯನ್ನು ಮಾಧ್ಯಮಗಳು, 'ಭಾರತ ಮಾತೆ' ಎಂದು ಹೇಳಿದ್ದಾಗಿ ತಪ್ಪಾಗಿ ಅರ್ಥೈಸಿವೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಸುರೇಶ್ ಗೋಪಿ ಹೇಳಿದರು.
ಈ ಕುರಿತಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, 'ಭಾಷೆಯ ಸಂದರ್ಭೋಚಿತ ಅರ್ಥವನ್ನು ಗ್ರಹಿಸಲು ಸಾಧ್ಯವಿಲ್ಲವೇ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
'ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ತಂದೆ ಕೆ. ಕರುಣಾಕರನ್, ದೇಶದಲ್ಲಿ ಇಂದಿರಾ ಗಾಂಧಿ ಎಂದು ನಾನು ಆಗ ಹೇಳಿದ್ದೆ. ನಾನೇನು ಹೇಳಿದ್ದೇನೋ ಅದನ್ನು ಹೃದಯದಿಂದ ಹೇಳಿದ್ದೇನೆ' ಎಂದರು.
ಶನಿವಾರ ತ್ರಿಶೂರ್‌ನಲ್ಲಿರುವ ಕೆ. ಕರುಣಾಕರನ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್ ಗೋಪಿ, 'ಇಂದಿರಾ ಅವರನ್ನು 'ಭಾರತದ ಮಾತೆ'ಯಾಗಿ ಪರಿಗಣಿಸುವಂತೆಯೇ, ಕರುಣಾಕರನ್ ಅವರನ್ನು ಕೇರಳದಲ್ಲಿ 'ಕಾಂಗ್ರೆಸ್‌ನ ತಂದೆ' ಎಂಬುದಾಗಿ ಪರಿಗಣಿಸುತ್ತೇನೆ' ಎಂದು ಹೇಳಿದ್ದರು.
ಕರುಣಾಕರನ್ ಮೇಲೆ ಇರುವ ಗೌರವದಿಂದಾಗಿ ಸ್ಮಾರಕಕ್ಕೆ ಭೇಟಿ ನೀಡಿರುವುದಾಗಿಯೂ ತಿಳಿಸಿದ್ದರು. ಸುರೇಶ್ ಗೋಪಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿತ್ತು.