ಮುಂಬೈ: ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಿಂದ ಮರಾಠರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಒಬಿಸಿಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಪುನರುಚ್ಚರಿಸಿದ್ದಾರೆ.
'ರಾಜ್ಯದಲ್ಲಿ ಜಾತಿಗಣತಿ ನಡೆಸುವಂತೆ' ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರೂ ಆಗಿರುವ ಭುಜಬಲ್ ಆಗ್ರಹಿಸಿದ್ದಾರೆ.
ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಒಬಿಸಿ ಹೋರಾಟಗಾರರಾದ ಲಕ್ಷ್ಮಣ ಹಾಕೆ ಹಾಗೂ ನವನಾಥ್ ವಾಘ್ಮೋರೆ ಅವರನ್ನು ಸರ್ಕಾರದ ನಿಯೋಗವೊಂದು ಸೋಮವಾರ ಭೇಟಿಯಾಗಿ ಧರಣಿ ಕೈಬಿಡುವಂತೆ ಮನವಿ ಮಾಡಿತು. ನಿಯೋಗದ ಈ ಕೋರಿಕೆಯನ್ನು ಮುಷ್ಕರ ನಿರತರಿಬ್ಬರು ನಿರಾಕರಿಸಿದ ಬೆನ್ನಿಗೆ ಸಚಿವರು ಈ ಹೇಳಿಕೆ ನೀಡಿದ್ದಾರೆ.
'ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಒಬಿಸಿ ಕೋಟಾಗೆ ತೊಂದರೆ ಆಗಬಾರದು ಎಂಬುದಷ್ಟೇ' ನಮ್ಮ ಬೇಡಿಕೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ.
ಕುಣಬಿಗಳನ್ನು ಮರಾಠರ ರಕ್ತ ಸಂಬಂಧಿಗಳು ಎಂದು ಉಲ್ಲೇಖಿಸಿ ಮಹಾರಾಷ್ಟ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮುಷ್ಕರ ನಡೆಸುತ್ತಿರುವ ಹೋರಾಟಗಾರರು ಒತ್ತಾಯಿಸಿದ್ದಾರೆ.
'ಒಬಿಸಿ ಕೋಟಾದಿಂದ ಮರಾಠರಿಗೆ ಮೀಸಲಾತಿ ನೀಡಲು ಆಗುವುದಿಲ್ಲ. ಇದನ್ನು ನಾವು ಹೇಳುತ್ತಿಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ರಚಿಸಿದ್ದ ನಾಲ್ಕು ಆಯೋಗಗಳೇ ಹೇಳಿವೆ. ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದೆ' ಆದರೆ, ಇದೀಗ ಮತ್ತೆ ಒಬಿಸಿ ಕೋಟಾದಡಿ ಮೀಸಲಾತಿ ನೀಡುವಂತೆ ಬೇಡಿಕೆ ಮಂಡಿಸಲಾಗುತ್ತಿದೆ ಎಂದು ಮರಾಠ ಹೋರಾಟಗಾರ ಮನೋಜ್ ಜರಾಂಗೆ ಅವರ ಪ್ರತಿಭಟನೆಯನ್ನು ಉಲ್ಲೇಖಿಸಿ ಸಚಿವ ಛಗನ್ ಹೇಳಿದರು.
ಒಬಿಸಿ ಸಮುದಾಯಕ್ಕೆ ಹೆಚ್ಚಿನ ಹಣವನ್ನು ನೀಡಲು ಜಾತಿ ಜನಗಣತಿಯು ದಾರಿ ಮಾಡಿಕೊಡುತ್ತದೆ ಎಂದು ಸಚಿವರು ತಿಳಿಸಿದರು.