ಮಂಜೇಶ್ವರ : ಕೇರಳದ ಗ್ರಂಥಾಲಯ ಪಿತಾಮಹ ಪಿ.ಎನ್. ಪಣಿಕ್ಕರ್ ರವರ ಸ್ಮರಣಾರ್ಥ ವಾಚನಾ ದಿನಾಚರಣೆಯಾಗಿ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ, ಕಲಾವಿದ ಶಂಕರ ರೈ ಮಾಸ್ತರ್ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಜ್ಞಾನ ವಿಕಾಸಕ್ಕೆ ಓದು ಅತೀ ಅಗತ್ಯ, ಅದಕ್ಕೆ ಪೂರಕವಾದ ಗ್ರಂಥಾಲಯದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು. ಜೊತೆಗೆ ಮಕ್ಕಳಿಗೆ ಕಥೆ, ಪದ್ಯ, ಅಭಿನಯ ಗೀತೆಗಳನ್ನು ಹಾಡಿ ಮಕ್ಕಳನ್ನು ಮನರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಜನಾರ್ಧನ ಪೂಜಾರಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಕಂಚಿಲ, ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅಶ್ವಿನಿ ಎಂ, ಶ್ವೇತ ಇ, ಆಯಿಶತ್ ಸೆಯಿದ ಸಹಕರಿಸಿದರು.