ತಿರುವನಂತಪುರ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವಂತೆ ರಾಜ್ಯದ ಉತ್ತರ ಭಾಗದಲ್ಲಿಯ ದೇವಸ್ಥಾನದ ಸಮೀಪ ಪ್ರಾಣಿಬಲಿಯನ್ನು ನೀಡಲಾಗಿಲ್ಲ ಎಂದು ಕೇರಳ ಸರಕಾರವು ಶನಿವಾರ ಪುನರುಚ್ಚರಿಸಿದೆ.
ಕಣ್ಣೂರು ಜಿಲ್ಲೆಯ ತಳಿಪರಂಬದ ರಾಜರಾಜೇಶ್ವರಿ ದೇವಸ್ಥಾನದ ಸಮೀಪ ತನ್ನ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಅಘೋರಿಗಳ ಮೂಲಕ 'ಶತ್ರು ಭೈರವಿ ಯಾಗ'ವನ್ನು ನಡೆಸಲಾಗಿದ್ದು,ಪ್ರಾಣಿಗಳನ್ನು ಬಲಿ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ಶಿವಕುಮಾರ ಮಾಡಿದ್ದಾರೆ ಎಂದು ಹೇಳಿದ ಕೇರಳ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಅವರು,' ಈ ಬಗ್ಗೆ ನಾವು ತನಿಖೆ ನಡೆಸಿದ್ದೇವೆ ಮತ್ತು ಮಲಬಾರ್ ದೇವಸ್ವಂ ಮಂಡಳಿಯನ್ನೂ ಸಂಪರ್ಕಿಸಿದ್ದೇವೆ.
ಶಿವಕುಮಾರ್ ಇಂತಹ ಗಂಭೀರ ಆರೋಪವನ್ನು ಮಾಡಿದ್ದೇಕೆ ಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ ರಾಧಾಕೃಷ್ಣನ್,ಪ್ರಾಥಮಿಕ ವರದಿಗಳಂತೆ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ ಕರ್ನಾಟಕದ ಉಪಮುಖ್ಯಮಂತ್ರಿಗಳು ಆರೋಪಿಸಿರುವಂತೆ ಕೇರಳದಲ್ಲಿ ಬೇರೆಲ್ಲಿಯಾದರೂ ನಡೆದಿದೆಯೇ ಎಂಬ ಬಗ್ಗೆ ಸರಕಾರವು ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
1968ರಿಂದಲೇ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ, ಹೀಗಾಗಿ ಕೇರಳದಲ್ಲಿ ಇಂತಹ ಘಟನೆ ನಡೆದಿರುವ ಸಾಧ್ಯತೆಯಿಲ್ಲ ಎಂದೂ ಸಚಿವರು ಹೇಳಿದರು.
ಶಿವಕುಮಾರ್ ಆರೋಪಗಳನ್ನು ಶುಕ್ರವಾರ ತಿರಸ್ಕರಿಸಿದ್ದ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯು,ಅವರ ಹೇಳಿಕೆಯನ್ನು ನೂರಕ್ಕೆ ನೂರರಷ್ಟು ಸುಳ್ಳು ಎಂದು ಬಣ್ಣಿಸಿತ್ತು.
ಕರ್ನಾಟಕದ ಉಪ ಮುಖ್ಯಮಂತ್ರಿಗಳು ಹೇಳಿರುವಂತೆ ಕೇರಳದಲ್ಲಿ ದೇವಸ್ಥಾನದ ಸಮೀಪ ಪ್ರಾಣಿಬಲಿ ನೀಡಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಸ್ಪೆಷಲ್ ಬ್ರ್ಯಾಂಚ್ ಕೂಡ ರಾಜ್ಯ ಪೋಲಿಸ್ ಮುಖ್ಯಸ್ಥರಿಗೆ ವರದಿಯನ್ನು ಸಲ್ಲಿಸಿದೆ.