ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ದಾಖಲಿಸಿರುವ ಪ್ರಕರಣಗಳಲ್ಲಿ ಜಾಮೀನು ಕೋರಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ದಾಖಲಿಸಿರುವ ಪ್ರಕರಣಗಳಲ್ಲಿ ಜಾಮೀನು ಕೋರಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಜಾಮೀನು ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಇ.ಡಿ ಮತ್ತು ಸಿಬಿಐಗಳು ಆರೋಪಪಟ್ಟಿ ಸಲ್ಲಿಸಿದ ಬಳಿಕ ಸಿಸೋಡಿಯಾ ಅವರ ಜಾಮೀನು ಅರ್ಜಿಗಳ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಜುಲೈ 3ರಂದು ಕೇಂದ್ರೀಯ ತನಿಖಾ ತಂಡಗಳು ಈ ಪ್ರಕರಣದ ಕುರಿತು ಅಂತಿಮ ದೋಷಾರೋಪಪಟ್ಟಿಯಲ್ಲಿ ಸಲ್ಲಿಸಲಿವೆ ಎಂದು ಇ.ಡಿ ಮತ್ತು ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ರಜಾ ಕಾಲದ ಪೀಠವು, ಸಮ್ಮತಿಸಿತು.
ತಮ್ಮ ಕಕ್ಷಿದಾರ ಕಳೆದ 15 ತಿಂಗಳುಗಳಿಂದ ಜೈಲಿನಲ್ಲಿರುವ ಹೊರತಾಗಿಯೂ, ಈ ಪ್ರಕರಣಗಳ ವಿಚಾರಣೆಯೇ ಇನ್ನೂ ಆರಂಭವಾಗಿಲ್ಲ. ಜೊತೆಗೆ ಈ ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿರುವ ಕಾರಣ ಭವಿಷ್ಯದಲ್ಲೂ ವಿಚಾರಣೆ ಆರಂಭವಾಗುವ ಸಾಧ್ಯತೆಯೇ ಇಲ್ಲ. ಹೀಗಾಗಿ, ತಮ್ಮ ಕಕ್ಷಿದಾರ ಸಿಸೋಡಿಯಾ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಎಂದು ಅಭಿಷೇಕ್ ಮನುಸಿಂಘ್ವಿ ಪೀಠಕ್ಕೆ ಕೋರಿದರು.
ಈ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ನಡೆದರೆ, ಸಿಸೋಡಿಯಾ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು 2023ರ ಅಕ್ಟೋಬರ್ 30ರಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ಪ್ರಕರಣದಲ್ಲಿ 162 ಸಾಕ್ಷ್ಯಗಳು ಇದ್ದು, 5 ಸಾವಿರ ಪುಟಗಳ ದಾಖಲೆಗಳನ್ನು ಹೊಂದಿರುವುದಾಗಿ ಇ.ಡಿ ಹೇಳುತ್ತಿದೆ. ಅಲ್ಲದೆ, 294 ಸಾಕ್ಷ್ಯಗಳು ಇದ್ದು, 30 ಸಾವಿರ ಪುಟಗಳ ದಾಖಲೆ ಹೊಂದಿರುವುದಾಗಿ ಸಿಬಿಐ ಹೇಳುತ್ತಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆ ಶೀಘ್ರ ಆರಂಭವಾಗುವ ಸಾಧ್ಯತೆಯೇ ಇಲ್ಲ ಎಂದು ಅಭಿಷೇಕ್ ಮನುಸಿಂಘ್ವಿ ವಾದಿಸಿದರು.