ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೆ ಸಾಲಿನ 'ಬಾಲ ಸಾಹಿತ್ಯ ಪುರಸ್ಕಾರ' ಮತ್ತು 'ಯುವ ಪುರಸ್ಕಾರ ಪ್ರಶಸ್ತಿ' ಪ್ರಕಟಗೊಂಡಿದ್ದು, 'ಬಾಲ ಸಾಹಿತ್ಯ ಪುರಸ್ಕಾರ'ಕ್ಕೆ ಕೃಷ್ಣಮೂರ್ತಿ ಬಿಳಿಗೆರೆ ಅವರ 'ಛೂಮಂತ್ರಯ್ಯನ ಕಥೆಗಳು' ಕಥಾ ಸಂಕಲನ ಆಯ್ಕೆಯಾಗಿದೆ.

ಅದೇ ರೀತಿಯಲ್ಲಿ 'ಯುವ ಸಾಹಿತ್ಯ ಪುರಸ್ಕಾರ'ಕ್ಕೆ ಮೈಸೂರಿನ ಶ್ರುತಿ ಅವರ 'ಜೀರೋ ಬ್ಯಾಲೆನ್ಸ್' ಕವನ ಸಂಕಲನ ಆಯ್ಕೆಗೊಂಡಿದೆ. ಪುರಸ್ಕಾರವು 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸ ರಾವ್ ಅವರು ಮಾಹಿತಿ ನೀಡಿದ್ದಾರೆ.
ಕೃಷ್ಣಮೂರ್ತಿ ಬಿಳಿಗೆರೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಹುಳಿಯಾರಿನ ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಶ್ರುತಿ ಬಿ.ಆರ್. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
'ಬಾಲ ಸಾಹಿತ್ಯ ಪುರಸ್ಕಾರ'ಕ್ಕೆ ಒಟ್ಟು ಏಳು ಕಾದಂಬರಿಗಳು, ಆರು ಕವನ ಸಂಕಲನಗಳು ನಾಲ್ಕು ಕಥಾ ಸಂಕಲನಗಳು, ಒಂದು ನಾಟಕ, ಒಂದು ಹಿಸ್ಟಾರಿಕಲ್ ಫಿಕ್ಷನ್ ಹಾಗೂ ಐದು ಸಣ್ಣ ಕಥಾ ಸಂಕಲನಗಳು ಆಯ್ಕೆಯಾಗಿವೆ. 'ಯುವ ಸಾಹಿತ್ಯ ಪುರಸ್ಕಾರ'ಕ್ಕೆ ಒಟ್ಟು 10 ಕವನ ಸಂಕಲನಗಳು, ಏಳು ಕಥಾ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಒಂದು ಕಾದಂಬರಿ, ಒಂದು ಗಝಲ್ ಕೃತಿ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.