ನವದೆಹಲಿ: 'ಒಂದು ದೇಶ, ಒಂದು ಚುನಾವಣೆ' ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಯನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದಿಡಲು ಕೇಂದ್ರ ಕಾನೂನು ಸಚಿವಾಲಯ ತಯಾರಿ ನಡೆಸಿದೆ.
ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದರೆ ಮೊದಲ 100 ದಿನಗಳಲ್ಲಿ ಮಾಡಬೇಕಾದ ಕೆಲಸದ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಿದ್ದರು.
'ಒಂದು ದೇಶ, ಒಂದು ಚುನಾವಣೆ' ಪರಿಕಲ್ಪನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸರ್ಕಾರ ನೇಮಿಸಿದ್ದ ಉನ್ನತಾಧಿಕಾರ ಸಮಿತಿಯು ತನ್ನ ವರದಿಯನ್ನು ಮಾರ್ಚ್ 15ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು.
ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಿ, ಬಳಿಕದ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಶಿಫಾರಸನ್ನು ಸಮಿತಿಯು ಮಾಡಿತ್ತು.
ತನ್ನ ಶಿಫಾರಸುಗಳ ಅನುಷ್ಠಾನಕ್ಕೆ ಒಂದು ತಂಡವನ್ನು ರಚಿಸುವಂತೆಯೂ ಸಲಹೆ ನೀಡಿತ್ತು. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸಂಪನ್ಮೂಲಗಳನ್ನು ಉಳಿಸಲು ಸಾಧ್ಯವಾಗುತ್ತದೆ, ಅಭಿವೃದ್ಧಿ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ಬುನಾದಿಯನ್ನು ಬಲಗೊಳಿಸುತ್ತದೆ ಎಂದು ಹೇಳಿತ್ತು.
ಸಂವಿಧಾನಕ್ಕೆ ಒಟ್ಟು 18 ತಿದ್ದುಪಡಿಗಳನ್ನು ತರುವ ಶಿಫಾರಸು ಮಾಡಿದ್ದ ಸಮಿತಿ, ಭಾರತೀಯ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಒಂದೇ ಮತದಾರರ ಪಟ್ಟಿ ಮತ್ತು ಗುರುತಿನ ಚೀಟಿಗಳನ್ನು ಸಿದ್ಧಪಡಿಸಬೇಕು ಎಂದಿತ್ತು.
ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು 2029ರಿಂದ ಜಾರಿಗೊಳಿಸಬೇಕೆಂಬ ಶಿಫಾರಸನ್ನು ಕಾನೂನು ಸಚಿವಾಲಯ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.