ಕಣ್ಣೂರು: ತಲಶ್ಶೇರಿ ಎರಂಜೋಳಿಯಲ್ಲಿ ಸ್ಟೀಲ್ ಬಾಂಬ್ ಸ್ಫೋಟದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕೂಡಕಳಂ ಮೂಲದ ವೇಲಾಯುಧನ್ (75) ಮೃತರು.
ಮನೆ ಸಮೀಪದ ಖಾಲಿ ಗದ್ದೆಯಲ್ಲಿ ತೆಂಗಿನ ಕಾಯಿ ಸಂಗ್ರಹಿಸಲು ಹೋದಾಗ ಅವಘಡ ಸಂಭವಿಸಿದೆ. ಎರಡೂ ಕೈಗಳೂ ಸಂಪೂರ್ಣ ಛಿದ್ರಗೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಎರಂಜೋಳಿ ಪಂಚಾಯತ್ ಕಚೇರಿ ಬಳಿ ಘಟನೆ ನಡೆದಿದೆ. ತೋಟದಲ್ಲಿ ಸಿಕ್ಕ ಸ್ಟೀಲ್ ಕಂಟೈನರ್ ತೆರೆದಾಗ ಸ್ಫೋಟಗೊಂಡಿದೆ. ಪೋಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ತಲಶ್ಶೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಫೋಟ ಸಂಭವಿಸಿದೆ.
ಎರಂಜೋಳಿ ಸಿಪಿಎಂನ ಶಕ್ತಿ ಕೇಂದ್ರವಾಗಿದೆ. ಆರು ತಿಂಗಳ ಹಿಂದೆ, ಸಮೀಪದ ಪಾನೂರಿನ ಪ್ರದೇಶದಲ್ಲಿ ಸ್ಟೀಲ್ ಬಾಂಬ್ ಸ್ಫೋಟದಲ್ಲಿ ಗುಜರಿ ಸಂಗ್ರಾಹಕನೋರ್ವ ಗಂಭೀರವಾಗಿ ಗಾಯಗೊಂಡಿದ್ದರು.