ಪೆರ್ಲ : ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಿಸುವಲ್ಲಿ ಹೆತ್ತವರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ಖ್ಯಾತ ವೈದ್ಯೆ ಡಾ. ಸಪ್ನಾ ಜೆ. ಉಕ್ಕಿನಡ್ಕ ತಿಳಿಸಿದ್ದಾರೆ.
ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಎಸ್.ಎನ್ ನೇಚರ್ ಕ್ಲಬ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿ ಹೆಸರಲ್ಲಿ ನಮ್ಮಲ್ಲಿನ ಹಸಿರ ಹೊದಿಕೆ ಇಂದು ಬರಿದಾಗುಗುತ್ತಿದೆ. ಏರುತ್ತಿರುವ ತಾಪಮಾನ ಜೀವ ಸಂಕುಲಗಳಿಗೆ ಮಾರಕವಾಗುತ್ತಿದ್ದು, ಇದರಿಂದ ಪಾರಾಗಲು ಅರಣ್ಯ ಬೆಳೆಸುವ ಬಗ್ಗೆ ಪ್ರತಿಯೊಬ್ಬನಲ್ಲಿ ನೈಜ ಕಾಳಜಿ ಮೂಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ್ ಪೆರ್ಲ, ಉಪಾಧ್ಯಕ್ಷ ನಾರಾಯಣ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭ ಶಾಲಾ ಮಕ್ಕಳಿಗೆ ಸಸ್ಯಗಳನ್ನು ಗುರುತಿಸುವ ಸ್ಪರ್ಧೆ ಆಯೋಜಿಸಲಾಯಿತು. ನಂತರ ಪ್ರತಿ ತರಗತಿಗೆ ಸಸಿಗಳನ್ನು ವಿತರಿಸಿ, ಇದನ್ನು ಶಾಲಾ ಪರಿಸರದಲ್ಲಿ ನೆಟ್ಟು, ಅದರ ಪೋಷಣೆ ಜವಾಬ್ದಾರಿ ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಅತಿಥಿಗಳಿಗೆ ವಿವಿಧ ಪ್ರಭೇದಗಳ ಸಸ್ಯಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಶಿಕ್ಷಕರಾದ ನೇಚರ್ ಕ್ಲಬ್ಬಿನ ಉಮೇಶ್ ಕೆ.ಪೆರ್ಲ ಸ್ವಾಗತಿಸಿದರು. ಅಕ್ಷತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಮಾಸ್ಟರ್ ವಂದಿಸಿದರು. ನಂತರ ಶಾಲಾ ವಠಾರದಲ್ಲಿ ವಿವಿಧ ಪ್ರಬೇದಗಳ ಸಸ್ಯಗಳನ್ನು ನೆಡಲಾಯಿತು.