ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್‌ನ ಶಾಲೆಯೊಂದರ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ( ಎನ್ಟಿಎ) ಮೇ 5 ರಂದು ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹಜಾರೀಬಾಗ್ ನಗರದ ಸಮನ್ವಯಾಧಿಕಾರಿಯಾಗಿ ಒಯಾಸಿಸ್ ಶಾಲೆಯ ಪ್ರಾಂಶುಪಾಲ ಇಹಸಾನುಲ್ ಹಕ್ ಅವರನ್ನು ನೇಮಿಸಲಾಗಿತ್ತು. ಉಪ ಪ್ರಾಂಶುಪಾಲ ಇಮ್ತಿಯಾಜ್ ಆಲಂ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿತ್ತು ಎಂದು ಹೇಳಿದ್ದಾರೆ.
ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಇನ್ನೂ ಐದು ಜನರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ವಿವರವಾದ ವಿಚಾರಣೆಯ ನಂತರ ಫೆಡರಲ್ ತನಿಖಾ ಸಂಸ್ಥೆ ಹಕ್ ಮತ್ತು ಆಲಂ ಅವರನ್ನು ಬಂಧಿಸಿದೆ ಎಂದು ಅವರು ಹೇಳಿದರು.
ಈ ವರ್ಷದ ಪರೀಕ್ಷೆಯನ್ನು ಮೇ 5 ರಂದು 14 ವಿದೇಶ ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ನಡೆಸಲಾಯಿತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಅನೇಕ ವಿದ್ಯಾರ್ಥಿಗಳು ಕೆಲವು ಪ್ರದೇಶಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ವರ್ಷ, NEET-UG ಪರೀಕ್ಷೆಯಲ್ಲಿ 67 ಮಂದಿ ಟಾಪರ್ ಗಳಾಗಿದ್ದು ಅವರೆಲ್ಲರೂ 720/720 ಅಂಕಗಳನ್ನು ಗಳಿಸಿದ್ದಾರೆ. NEET 2023 ರಲ್ಲಿ ಇಬ್ಬರು ಟಾಪರ್ ಮತ್ತು 2022 ರಲ್ಲಿ ಒಬ್ಬ ಟಾಪರ್ ಆಗಿದ್ದರು.