ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲದ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರಾಯ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಸಿಎಂ ಪತ್ನಿಯ ಈ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಅವರ ರಾಜೀನಾಮೆಯನ್ನು ಸ್ಪೀಕರ್ ಎಂಎನ್ ಶೆರ್ಪಾ ಇಂದು ಅಂಗೀಕರಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ನಮ್ಚಿ-ಸಿಂಘಿಥಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಅಭ್ಯರ್ಥಿ ಬಿಮಲ್ ರಾಯ್ ಅವರನ್ನು ಕೃಷ್ಣ ಕುಮಾರಿ ಸೋಲಿಸಿದ್ದರು. ರಾಯ್ ಅವರು 7907 ಮತಗಳನ್ನು ಪಡೆದರೆ, ಅವರ ಎಸ್‌ಡಿಎಫ್ ಎದುರಾಳಿ 2605 ಮತಗಳನ್ನು ಪಡೆದಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, 56 ವರ್ಷದ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯ ಚುನಾವಣೆಗಳಲ್ಲಿ ಪ್ರಚಂಡ ಗೆಲುವು ಸಾಧಿಸಿತು. 32 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳನ್ನು ಗೆದ್ದಿರುವ ಪಕ್ಷವು ಸಿಕ್ಕಿಂನ ಏಕೈಕ ಲೋಕಸಭಾ ಸ್ಥಾನವನ್ನೂ ಗೆದ್ದುಕೊಂಡಿದೆ.
ಲೋಕಸಭೆ ಚುನಾವಣೆಯ ಜೊತೆಗೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯೂ ನಡೆದಿತ್ತು. ಮುಖ್ಯಮಂತ್ರಿ ತಮಾಂಗ್ ಅವರು ಸ್ಪರ್ಧಿಸಿದ್ದ ರೆನಾಕ್ ಮತ್ತು ಸೊರೆಂಗ್-ಚಕುಂಗ್ ಕ್ಷೇತ್ರಗಳೆರಡರಿಂದಲೂ ಗೆದ್ದಿದ್ದಾರೆ. ಆದರೆ, 2019 ರವರೆಗೆ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF), ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿತ್ತು. ಸಿಕ್ಕಿಂ ಸಿಎಂ ತಮಾಂಗ್ ಅವರು ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಲಿದ್ದಾರೆ.