ವಾರಾಣಸಿ: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ಪ್ರಧಾನ ಅರ್ಚಕ ಆಚಾರ್ಯ ಲಕ್ಷ್ಮಿಕಾಂತ್ ದೀಕ್ಷಿತ್(86) ಅವರು ಇಂದು ಬೆಳಿಗ್ಗೆ ನಿಧನರಾದರು.
ವಾರಾಣಸಿಯ ಹಿರಿಯ ವಿದ್ವಾಂಸರಲ್ಲಿ ಒಬ್ಬರೆನಿಸಿಕೊಂಡಿರುವ ದೀಕ್ಷಿತ್ ಅವರು ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಹಲವು ತಲೆಮಾರುಗಳಿಂದ ವಾರಾಣಸಿಯಲ್ಲಿ ವಾಸಿಸುತ್ತಿದೆ.
ಜನವರಿ 22ರಂದು ಅಯೋಧ್ಯೆ ರಾಮಮಂದಿದಲ್ಲಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತ್ತು.ಸಂತಾಪ ಸೂಚಿಸಿದ ಸಿಎಂ ಯೋಗಿ ಆದಿತ್ಯನಾಥ್
ದೀಕ್ಷಿತ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.
'ಕಾಶಿಯ ಮಹಾನ್ ವಿದ್ವಾಂಸರು ಮತ್ತು ರಾಮ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿದ್ದ ಪ್ರಧಾನ ಅರ್ಚಕ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ಅಗಲಿಕೆ ಆಧ್ಯಾತ್ಮಿಕ ಮತ್ತು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ಸಲ್ಲಿಸಿದ ಸೇವೆಗಾಗಿ ಅವರು ಯಾವಾಗಲೂ ಸ್ಮರಣೀಯರಾಗಿದ್ದಾರೆ' ಎಂದು ಅವರು ಹೇಳಿದರು.
'ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬ, ಶಿಷ್ಯರು ಮತ್ತು ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಶ್ರೀರಾಮನು ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದರು.