ನವದೆಹಲಿ: ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಜೂನ್ 17) ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದ ನಂತರ ಇದು ಕೇಂದ್ರ ಸರ್ಕಾರದ ಮೊದಲ ಉನ್ನತ ಮಟ್ಟದ ಸಭೆ ಆಗಿದೆ.
ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ತಪನ್ ದೇಕಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಜಿಒಸಿ ತ್ರೀ ಕಾರ್ಪ್ಸ್ ಎಚ್.ಎಸ್.ಸಾಹಿ, ಮಣಿಪುರ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಮಣಿಪುರ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ, ಮಣಿಪುರ ಮುಖ್ಯ ಕಾರ್ಯದರ್ಶಿ ಡಿಜಿಪಿ ರಾಜೀವ್ ಸಿಂಗ್ ಮತ್ತು ಅಸ್ಸಾಂ ರೈಫಲ್ಸ್ ಡಿಜಿ ಪ್ರದೀಪ್ ಚಂದ್ರನ್ ನಾಯರ್ ಹಾಜರಿದ್ದರು.
ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಕೆ ಅವರು ಭಾನುವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಒಂದು ದಿನದ ನಂತರ ಈ ಸಭೆ ನಡೆಸಲಾಗುತ್ತಿದೆ.
ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಆರಂಭವಾದ ಹಿಂಸಾಚಾರ ಇನ್ನೂ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ಎರಡು ಸಮುದಾಯಗಳಾದ ಕುಕಿ ಮತ್ತು ಮೈತೆಯಿ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಕನಿಷ್ಠ 225 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 50,000 ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತ ಜನರು ಇನ್ನೂ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಇದೆ.
ಮಣಿಪುರದ ಹಿಂಸಾಚಾರವನ್ನು ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹೆಚ್ಚಿನ ಸಂಖ್ಯೆಯ ಕೇಂದ್ರ ಪಡೆಗಳನ್ನು ಸಹ ನಿಯೋಜಿಸಲಾಗಿತ್ತು, ಆದರೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈಗ ಮತ್ತೊಮ್ಮೆ ಇಲ್ಲಿ ಪರಿಸ್ಥಿತಿ ಬಿಗಡಾಯಿಸಲು ಆರಂಭಿಸಿದೆ ಎನ್ನಲಾಗಿದೆ.
ಈಶಾನ್ಯ ರಾಜ್ಯವು ಕಳೆದ ಎರಡು ವಾರಗಳಲ್ಲಿ ಹೊಸ ಹಿಂಸಾಚಾರವನ್ನು ಕಂಡಿದೆ. ಮೋರೆ ಬಳಿಯ ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿತ್ತು. ಮತ್ತು ಕಾಣೆಯಾದ ವ್ಯಕ್ತಿಯ ಶಿರಚ್ಛೇದನ ದೇಹವು ಪತ್ತೆಯಾಗಿದೆ. ಅಲ್ಲದೆ ಕಳೆದ ವಾರ, ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಭದ್ರತಾ ತಂಡದ ಬೆಂಗಾವಲು ಪಡೆಯ ಮೇಲೆ ಶಸ್ತ್ರಸಜ್ಜಿತ ಉಗ್ರರು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಹೊಂಚುದಾಳಿ ನಡೆಸಿದ್ದರು.