ಕಾಸರಗೋಡು: ಜಿಲ್ಲಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ವಿಪತ್ತು ನಿವಾರಣಾ ಇಲಾಖೆ ಮಾಹಿತಿ ನೀಡಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವುದರ ಜತೆಗೆ ಎತ್ತರದ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಕರಾವಳಿಯಲ್ಲಿ ವಿಶೇಷ ನಿಗಾ ಅಗತ್ಯ ಎಂದು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಶೋಧನಾ ಕೇಂದ್ರ (ಐಎನ್‍ಸಿಓಐಎಸ್)ಎಚ್ಚರಿಕೆ ನೀಡಿದೆ. ಕಾಸರಗೋಡು ಅಲ್ಲದೆ, ಕಣ್ಣೂರು, ಕೋಯಿಕ್ಕೋಡ್, ತೃಸ್ಯೂರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.
ಜೂ. 27ರಂದು ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳ ಸಮುದ್ರ ಕರಾವಳಿಯಲ್ಲಿ 2.9 ರಿಂದ 3.4 ಮೀಟರ್ ಎತ್ತರದ ವರೆಗೆ ಅಲೆ ಮತ್ತು ಬಿರುಸಿನ ಗಾಳಿ ಬೀಸುವ ಸಾಧ್ಯತೆಯಿದ್ದು, ಈ ಪ್ರದೇಶಗಳಲ್ಲಿ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಹೆಚ್ಚಿನ ಜಾಗರೂಕತೆ ಪಾಲಿಸಬೇಕು ಎಂದು ಐಎನ್‍ಸಿಓಐಎಸ್ ಎಚ್ಚರಿಸಿದೆ.
ಸಮುದ್ರದ ಪ್ರಕ್ಷುಬ್ಧತೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳ ಸೂಚನೆಯಂತೆ ಅಪಾಯದ ಪ್ರದೇಶಗಳಿಂದ ದೂರವಿರಬೇಕು, ಮೀನುಗಾರಿಕಾ ದೋಣಿಗಳನ್ನು ಹಾಗೂ ಇತರ ಪರಿಕರಗಳನ್ನು ಸುರಕ್ಷಿತವಾಗಿ ಬಂದರಿನಲ್ಲಿ ಇರಿಸುವುದರ ಜತೆಗೆ ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಖು, ಕಡಲತೀರದ ಪ್ರವಾಸ ಮತ್ತು ಸಮುದ್ರದಲ್ಲಿನ ಇತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹೊರತುಪಡಿಸುವಂತೆಯೂ ಸೂಚಿಸಲಾಗಿದೆ.