ಕೋಪೆನ್‌ಹೇಗನ್: ಡೆನ್ಮಾರ್ಕ್ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರ ಮೇಲೆ ಸಾರ್ವಜನಿಕವಾಗಿ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಪೆನ್‌ಹೇಗನ್‌ನಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ.
ಆರೋಪಿ ಏಕಾಏಕಿ ದಾಳಿ ನಡೆಸಿದ್ದರಿಂದ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಆಘಾತಕ್ಕೊಳಗಾಗಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.
ಮ್ಯಾಟೆ ಫ್ರೆಡೆರಿಕ್ಸೆನ್ ಅವರಿಗೆ ಗಂಭೀರ ಸ್ವರೂಪ ಗಾಯಗಳಾಗಿಲ್ಲ. ದಾಳಿ ಬೆನ್ನಲ್ಲೇ ಮ್ಯಾಟೆ ಅವರನ್ನು ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಆರೋಪಿ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ಈಚೆಗೆ ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫಿಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.