ಮಂಜೇಶ್ವರ: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಬಹುತೇಕ ಹೊಳೆಗಳು ತುಂಬಿ ಹರಿಯಲಾರಂಭಿಸಿದೆ. ಗಾಳಿ-ಮಳೆಗೆ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ. ಕಾಸರಗೊಡು ವಿದ್ಯಾನಗರ ಇಂಡಸ್ಟ್ರಿಯಲ್ ಎಸ್ಟೇಟ್ ವಠಾರದಲ್ಲಿ ಬೃಹತ್ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ಹೊಸಂಗಡಿ ರೈಲ್ವೆ ಗೇಟ್‍ಗೆ ಮರದ ರೆಂಬೆ ಮುರಿದು ಬಿದ್ದು, ಇತ್ತೀಚೆಗಷ್ಟೆ ಅಳವಡಿಸಲಾದ ಹೊಸ ರೈಲ್ವೆ ಗೇಟ್ ಹಾನಿಗೀಡಾಗಿದೆ. ರೈಲ್ವೆ ಗೇಟಿನ ಎದುರುಭಾಗದ ಸಿದ್ದೀಕ್ ಎಂಬವರ ಮಾಂಸದ ಕೋಳಿ ಮಾರಾಟದ ಅಂಗಡಿಗೆ ಮರವೊಂದು ಉರುಳಿಬಿದ್ದು ಹಾನಿಯುಂಟಾಗಿದೆ. ಹೊಸಂಗಡಿ ಜಂಕ್ಷನಲ್ಲಿ ಆನೆಕಲ್ಲು ಭಾಗಕ್ಕೆ ತೆರಳುವ ಬಸ್‍ತಂಗುದಾಣದ ಬಳಿಯಿರುವ ಪತ್ರಿಕಾ ಏಜಂಟ್ ರಾಜ ಎಂಬವರ ಅಂಗಡಿಗೆ ಮರ ಉರುಳಿ ಹಾನಿಸಂಭವಿಸಿದೆ. ಬಿರುಸಿನ ಗಾಳಿಗೆ ಸಂದೇಶ್ ಎಂಬವರ ಲಾಟರಿ ಮಾರಾಟದ ಅಂಗಡಿ ಶೀಟ್ ಹಾರಿಹೋಗಿದೆ. ಇದೇ ಪರಿಸರದ ಭಾಗ್ಯಚಂದ್ರ ಎಂಬವರ ವೆಲ್ಡಿಂಗ್ ಅಂಗಡಿ ಮಹಡಿಗೆ ಮರವೊಂದು ಬುಡಸಹಿತ ಕಳವಿಬಿದ್ದು ಹಾನಿಯುಂಟಾಗಿದೆ. ಮಂಜೇಶ್ವರದ ವಿವಿಧೆಡೆ ವಿದ್ಯುತ್ ತಂತಿಗೆ ಮರವುರುಳಿಬಿದ್ದ ಪರಿಣಾಂ ವ್ಯಾಪಕ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ಉಪ್ಪಳದಲ್ಲಿ ಸಮುದ್ರಕೊರೆತ:
ಮಳೆ ಬಿರುಸುಗೊಳ್ಳುತ್ತಿದ್ದಂತೆ ಮಂಗಲ್ಪಾಡಿ ಪಂಚಾಯಿತಿಯ ಉಪ್ಪಳ ಹನುಮಾನ್ ನಗರ, ಮಣಿಮುಂಡ, ಶಾರದಾನಗರ, ಮುಸೋಡಿ ಕರಾವಳಿಯಲ್ಲಿ ಸಮುದ್ರಕೊರೆತ ವ್ಯಾಪಕಗೊಂಡಿದೆ. ಕರಾವಳಿಗೆ ಹೊಂದಿಕೊಂಡಿರುವ ಮಂದಿರ, ಮನೆಗಳು ಅಪಾಯದ ಭೀತಿ ಎದುರಿಸುತ್ತಿದೆ. ಸಮುದ್ರ ದಡದಲ್ಲಿ ಅಳವಡಿಸಿರುವ ಕಗ್ಗಲ್ಲಿನ ತಡೆಗೋಡೆ ಸಮುದ್ರಪಾಲಾಗುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮನೆಮಾಡಿದೆ.