ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾದ ಕೃಷ್ಣಪ್ರಸಾದ್ ಅಮ್ಮಂಗೋಡು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಭಾರತದ ಕುರಿತು ಕನಸು ಕಾಣುವ ವಿದ್ಯಾರ್ಥಿಗಳಿದ್ದಾರೆ, ವಿದ್ಯೆ ನಮಗೆ ಗುರುವಿನೆಡೆಗೆ ಬಾಗುವುದನ್ನು ಕಲಿಸುತ್ತದೆ ಮತ್ತು ಕಲಿಸಬೇಕು, ಉತ್ತಮ ಭವಿಷ್ಯವು ಆಗ ರೂಪುಗೊಳ್ಳುತ್ತದ ಎಂದರು.
ಶಾಲಾ ಸಮಿತಿಯ ಅಧ್ಯಕ್ಷ ಗಣೇಶವತ್ಸ, ಮುಖ್ಯೋಪಾಧ್ಯಾಯ ವೇಣುಗೋಪಾಲನ್ ನಾಯರ್, ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ನಾರಾಯಣ ಶೆಟ್ಟಿ, ರಂಗನಾಥ ರಾವ್, ಸೂರ್ಯನಾರಾಯಣ ಭಟ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನವಾಗತ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಆರತಿಯನ್ನು ಬೆಳಗಿ ತಿಲಕವಿಟ್ಟು ಸಿಹಿ ತಿನ್ನಿಸಿ ಸ್ವಾಗತಿಸಲಾಯಿತು. ಐದನೇ ತರಗತಿ ವಿದ್ಯಾರ್ಥಿ ಈಶಾನ್ ದಾಮೋದರ್ ಭಗವದ್ಗೀತೆಯನ್ನು ವಾಚಿಸಿದರು. ಅನಂತರ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಎಲ್.ಎಸ್.ಎಸ್., ಯು.ಎಸ್.ಎಸ್. ಸ್ಕಾಲರ್ಶಿಪ್ ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಎಂಟನೇ ತರಗತಿಗೆ ಸಂಸ್ಕøತ ಪಾಠವನ್ನು ಪ್ರಾರಂಭಿಸುವ ಸೂಚಕವಾಗಿ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಶಾಲೆಯ ಹಿರಿಯ ಶಿಕ್ಷಕಿ ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಿಕೆ ಉಷಾ ಸ್ವಾಗತಿಸಿ, ಶ್ರೀವಿದ್ಯಾ ವಂದಿಸಿದರು. ನಮಿತಾ ಮತ್ತು ರಜಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪಾಲಕರು, ಅಧ್ಯಾಪಕವೃಂದ ಮತ್ತಿತರ ಆಡಳಿತ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.