ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ಶನಿವಾರ ನಡೆಸಿದ 'ಅತ್ಯಂತ ಸಂಕೀರ್ಣ ಕಾರ್ಯಾಚರಣೆ'ಯಲ್ಲಿ ನಾಲ್ವರು ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ತಿಳಿಸಿದೆ.
ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಇವರನ್ನು ಒತ್ತೆಯಾಳುಗಳನ್ನಾಗಿ ಸಿದ್ದರು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.
ಗಾಜಾದ ಅಲ್ ನುಸೈರಾತ್ ಪ್ರದೇಶದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಒತ್ತೆಯಾಳು ಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಬಂಡುಕೋರರು ಮತ್ತು ಇಸ್ರೇಲ್ ಸೇನೆ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಸ್ರೇಲ್ ಸೇನೆಯ ಅಧಿಕಾರಿಯೊಬ್ಬರು ಆ ಬಳಿಕ ಮೃತಪಟ್ಟಿರುವುದಾಗಿ ಸೇನೆಯ ಮೂಲಗಳು ತಿಳಿಸಿವೆ.
ಅ.7 ರಂದು ನಡೆಸಿದ್ದ ದಾಳಿಯ ವೇಳೆ ಹಮಾಸ್ ಬಂಡುಕೋರರು 251 ಮಂದಿಯನ್ನು ಒತ್ತೆಸೆರೆ ಇರಿಸಿಕೊಂಡಿದ್ದರು. ಇಸ್ರೇಲ್ ಪಡೆಗಳ ಪ್ರಕಾರ, ಇನ್ನು ಸುಮಾರು 116 ಒತ್ತೆಯಾಳುಗಳು ಹಮಾಸ್ ವಶದಲ್ಲಿ ಇದ್ದಾರೆ. ಒತ್ತೆಯಾಳಾಗಿದ್ದ ಅವಧಿಯಲ್ಲಿಯೇ ಸುಮಾರು 41 ಜನರು ಮೃತಪಟ್ಟಿದ್ದಾರೆ.
210 ಪ್ಯಾಲೆಸ್ಟೀನಿಯರ ಸಾವು: ಗಾಜಾ ಪಟ್ಟಿಯ ಅಲ್ ನುಸೈರಾತ್ ಶಿಬಿರದ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 210 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಶನಿವಾರ ಹೇಳಿದೆ.
'ಇಸ್ರೇಲ್ ಸೇನೆ ದಾಳಿಯಿಂದ ಹುತಾತ್ಮರಾದವರ ಸಂಖ್ಯೆ 210 ತಲುಪಿದೆ. 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ' ಎಂದು ಹಮಾಸ್ ಮಾಧ್ಯಮ ಪ್ರಕಟಣೆ ತಿಳಿಸಿದೆ.