ವಿಶ್ವಸಂಸ್ಥೆ: ಮಹಿಳೆಯರ ಹಕ್ಕುಗಳ ಮೇಲಿನ ನಿರ್ಬಂಧವು ಅಫ್ಘಾನಿಸ್ತಾನವನ್ನು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಮರುಸಂಘಟಿಸಲು ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದು ದೋಹಾದಲ್ಲಿ ಮುಂಬರುವ ಮಾತುಕತೆಯಲ್ಲಿ ತಾಲಿಬಾನ್‍ನ ಭಾಗವಹಿಸುವಿಕೆಯು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸಲ್ಪಟ್ಟ ಅಫ್ಘಾನ್ ಸರಕಾರವನ್ನು ಕಾನೂನುಬದ್ಧಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
2021ರಲ್ಲಿ ಅಧಿಕಾರಕ್ಕೆ ಮರಳಿದಂದಿನಿಂದ ಯಾವುದೇ ದೇಶವು ತಾಲಿಬಾನ್ ಅಧಿಕಾರಿಗಳನ್ನು ಅಧಿಕೃತವಾಗಿ ಮಾನ್ಯತೆ ಮಾಡಿಲ್ಲ. ಮಹಿಳೆಯರ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತಿರುವ ತಾಲಿಬಾನ್ ಆಡಳಿತ ಲಿಂಗ ವರ್ಣಬೇಧ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಟೀಕಿಸಿದೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ನಿರ್ಬಂಧಗಳು, (ವಿಶೇಷವಾಗಿ ಶಿಕ್ಷಣದಲ್ಲಿ) ಮಾನವ ಸಂಪನ್ಮೂಲದ ಸದ್ಬಳಕೆಯ ಅವಕಾಶವನ್ನು ನಿರಾಕರಿಸುತ್ತದೆ ಮತ್ತು ಪ್ರತಿಭಾ ಪಲಾಯನಕ್ಕೆ ಕಾರಣವಾಗಿ ದೇಶದ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಕಾರ್ಯಯೋಜನೆ(ಯುಎನ್‍ಎಎಂಎ)ಯ ಮುಖ್ಯಸ್ಥೆ ರೋಝಾ ಒಟುಂಬಯೆವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ.
ಜನಪ್ರಿಯವಲ್ಲದ ನಿರ್ಬಂಧ ಕ್ರಮಗಳು ತಾಲಿಬಾನ್ ಅಧಿಕಾರಿಗಳ ನ್ಯಾಯಸಮ್ಮತೆಗೆ ಅಡ್ಡಿಯಾಗಿದೆ. ಇದರ ಜತೆಗೆ ಅವರು ಅಂತರಾಷ್ಟ್ರೀಯ ಸಮುದಾಯಕ್ಕೆ ಅಫ್ಘಾನ್‍ನ ಮರುಸೇರ್ಪಡೆ ನಿಟ್ಟಿನಲ್ಲಿ ನಡೆಯುವ ರಾಜತಾಂತ್ರಿಕ ಪ್ರಕ್ರಿಯೆಗೆ ಅಡ್ಡಿಯನ್ನು ಮುಂದುವರಿಸಿದ್ದಾರೆ ಎಂದು ರೋಝಾ ಒಟುಂಬಯೆವ ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ಜಾಗತಿಕ ಸಮುದಾಯದ ಜತೆ ಸಂಪರ್ಕಿಸುವ ಪ್ರಯತ್ನಗಳನ್ನು ಬಲಪಡಿಸುವ ಪ್ರಕ್ರಿಯೆಗೆ ಕಳೆದ ವರ್ಷ ದೋಹಾದಲ್ಲಿ ಚಾಲನೆ ನೀಡಲಾಗಿದೆ. ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ ಪ್ರಥಮ ದೋಹಾ ಮಾತುಕತೆಯಲ್ಲಿ ಅಫ್ಘಾನಿಸ್ತಾನಕ್ಕೆ ವಿದೇಶಿ ವಿಶೇಷ ರಾಯಭಾರಿಗಳು ಪಾಲ್ಗೊಂಡಿದ್ದರು. ಆದರೆ ತಾಲಿಬಾನ್ ಅಧಿಕಾರಿಗಳನ್ನು ಮಾತುಕತೆಯಿಂದ ಹೊರಗಿಡಲಾಗಿತ್ತು. ಅಫ್ಘಾನಿಸ್ತಾನದಿಂದ ಬೇರೆ ಪ್ರತಿನಿಧಿಗಳು ಪಾಲ್ಗೊಂಡರೆ ಎರಡನೆ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಮೂರನೇ ಸುತ್ತಿನ ಮಾತುಕತೆ ದೋಹಾದಲ್ಲಿ ಜೂನ್ 30 ಮತ್ತು ಜುಲೈ 1ರಂದು ನಡೆಯಲಿದ್ದು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಾಲಿಬಾನ್ ಭರವಸೆ ನೀಡಿದೆ.
ಅಫ್ಘಾನಿಸ್ತಾನವನ್ನು ಜಾಗತಿಕ ಸಮುದಾಯದೊಂದಿಗೆ ಮರು ಸೇರ್ಪಡೆಗೊಳಿಸುವ ಪ್ರಕ್ರಿಯೆ ನಿಜವಾಗಿಯೂ ಆರಂಭಗೊಳ್ಳಬೇಕಿದ್ದರೆ ತಾಲಿಬಾನ್ ಅಧಿಕಾರಿಗಳು ದೋಹಾ ಮಾತುಕತೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಒಂದು ಸಭೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಬಾರದು. ಅಲ್ಲದೆ, ಈ ರೀತಿಯ ಪಾಲ್ಗೊಳ್ಳುವಿಕೆ ತಾಲಿಬಾನ್ ಆಡಳಿತವನ್ನು ಕಾನೂನುಬದ್ಧಗೊಳಿಸುವ ಅಥವಾ ಸಾಮಾನ್ಯೀಕರಣಗೊಳಿಸುವ ವ್ಯವಸ್ಥೆಯಲ್ಲ ಎಂದು ಒಟುಂಬಯೆವ ಒತ್ತಿಹೇಳಿದ್ದಾರೆ.
ಜುಲೈ 2ರಂದು ಪ್ರತ್ಯೇಕ ಸಭೆ:
ಜೂನ್ 30 ಮತ್ತು ಜುಲೈ 1ರ ಸಭೆಯಲ್ಲಿ ತಾಲಿಬಾನ್ ಪಾಲ್ಗೊಂಡರೂ, ಅಫ್ಘಾನ್ ನಾಗರಿಕ ಸಮಾಜದ ಪ್ರತಿನಿಧಿಗಳು, ವಿಶೇಷವಾಗಿ ಮಹಿಳೆಯರ ಅನುಪಸ್ಥಿತಿಯ ಬಗ್ಗೆ ಎದುರಾಗಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಒಟುಂಬಯೆವ `ಈ ಗುಂಪುಗಳು ಜುಲೈ 2ರಂದು ದೋಹಾದಲ್ಲೇ ನಡೆಯುವ ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಳ್ಳಲಿವೆ. ಇದು ಉತ್ತಮ ಬೆಳವಣಿಗೆಯಾಗಿದೆ' ಎಂದರು.
ದೋಹಾದಲ್ಲಿ ನಡೆಯಲಿರುವ ಮೂರನೇ ಸಭೆಯಲ್ಲಿ ನಾಗರಿಕ ಸಮಾಜ ಮತ್ತು ಮಹಿಳೆಯರ ಅನುಪಸ್ಥಿತಿ ನಿರಾಶಾದಾಯಕವಾಗಿದೆ ಎಂದು ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ರಾಯಭಾರಿ ನಾಸಿರ್ ಅಹ್ಮದ್ ಹೇಳಿದ್ದಾರೆ. ಮಾತುಕತೆಯ ಅಜೆಂಡಾವು ಅಫ್ಘಾನಿಸ್ತಾನದ ರಾಜಕೀಯ ಪ್ರಕ್ರಿಯೆ ಮತ್ತು ಮಾನವ ಹಕ್ಕುಗಳ ವಿಷಯವನ್ನು ಒಳಗೊಂಡಿಲ್ಲ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.