ಜಲಪಾಯ್ಗುಡಿ: ಅಸ್ಸಾಂನ ಲಮ್‌ಡಿಂಗ್ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ರೈಲುಗಳಿಗೆ ಮಾಡಲಾಗುವ ಮಾರ್ಗದ ದಿಕ್ಕು ಬದಲಾವಣೆ ಪ್ರಕ್ರಿಯೆಯು ಸೋಮವಾರ ಅಪಘಾತಕ್ಕೀಡಾದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಕೆಲವರ ಜೀವ ಉಳಿಸಿದರೆ, ಇನ್ನೂ ಕೆಲವರ ಪ್ರಾಣಕ್ಕೆ ಕುತ್ತು ತಂದಿದೆ.
ಲಮ್‌ಡಿಂಗ್‌ನಲ್ಲಿ ರೈಲಿನ ಮಾರ್ಗದ ದಿಕ್ಕನ್ನು ಬದಲಾಯಿಸಲಾಗುತ್ತದೆ. ಅಂದರೆ, ಎದುರಿಗೆ ಇದ್ದ ಎಂಜಿನ್ ಅನ್ನು ಹಿಂಭಾಗಕ್ಕೆ ಜೋಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಆರಂಭದಲ್ಲಿ ಮುಂಭಾಗದಲ್ಲಿದ್ದ ಬೋಗಿಗಳು ನಂತರ ಹಿಂಭಾಗದಲ್ಲಿರುತ್ತವೆ.
'ರಂಗಾಪಾನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹಾನಿಗೀಡಾದ ಬೋಗಿಗಳು ಲಮ್‌ಡಿಂಗ್‌ವರೆಗೂ ಮುಂಭಾಗದಲ್ಲಿದ್ದವು' ಎಂದು ರೈಲಿನ ಸ್ಲೀಪರ್ ಕೋಚ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಹೇಳಿದರು.
'ಅಪಘಾತದಲ್ಲಿ ಪ್ರಯಾಣಿಕರಿದ್ದ ಸಾಮಾನ್ಯ ಬೋಗಿ, ಎರಡು ಪಾರ್ಸೆಲ್ ಬೋಗಿಗಳು ಮತ್ತು ಕಾವಲು ಸಿಬ್ಬಂದಿಯ ಬೋಗಿಗಳು ಹಾನಿಗೀಡಾಗಿದ್ದು, ರೈಲಿನ ಮಾರ್ಗ ಬದಲಾವಣೆಯ ನಂತರ ಈ ಬೋಗಿಗಳು ಹಿಂಭಾಗಕ್ಕೆ ಬಂದಿದ್ದವು. ನಾಲ್ಕು ಬೋಗಿಗಳ ಪೈಕಿ ಸಾಮಾನ್ಯ ಬೋಗಿಗೆ ಹೆಚ್ಚು ಹಾನಿಯಾಗಿದ್ದು, ಗೂಡ್ಸ್ ರೈಲು ಗುದ್ದಿದ ರಭಸಕ್ಕೆ ಬೋಗಿಯು ಪಕ್ಕದ ಹಳಿಗಳಿಗೆ ಅಪ್ಪಳಿಸಿದೆ' ಎಂದು ಅವರು ವಿವರಿಸಿದರು.
ವೇಗವಾಗಿ ಸಂಚರಿಸುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ನಿಧಾನವಾಗಿ ಸಾಗುತ್ತಿತ್ತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸ್ಥಳೀಯರೊಬ್ಬರು ಮಾಹಿತಿ ನೀಡಿದರು.