HEALTH TIPS

ಕಾಸರಗೋಡಿನ ವಿಲೀನೀಕರಣಕ್ಕಾಗಿ ಡಾ. ಕಯ್ಯಾರ ನಡೆಸಿದ ಹೋರಾಟ : ಮಹತ್ತರವಾದುದು-ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ

              ಉಪ್ಪಳ: ತಮ್ಮ ಜೀವನದ ಆಶಯವಾಗಿದ್ದ ಕಾಸರಗೋಡಿನ ವಿಲೀಕರಣ ಸಾಧ್ಯವಾಗದಿದ್ದರೂ, ಗಡಿನಾಡಿನಲ್ಲಿ ಕನ್ನಡವನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡುವಲ್ಲಿ ಕನ್ನಡದ ಕಟ್ಟಾಳು, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಶ್ರಮ ಮಹತ್ತರವಾದುದು ಎಂಬುದಾಗಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. 

        ಅವರು ಪೈವಳಿಕೆ ಪಂಚಾಯಿತಿ ಕಯ್ಯಾರು ಜೋಡುಕಲ್ಲು ಶ್ರೀ ರಾಮಕೃಷ್ಣ ಎಎಲ್‍ಪಿ ಶಾಲೆಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ನಾಡೋಜ, ಡಾ. ಕಯ್ಯಾರ ಕಿಞಣ್ಣ ರೈ ಜನ್ಮ ದಿನಾಚರಣೆ ಹಾಗೂ ಡಾ. ಕಯ್ಯಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಡಾ. ಕಯ್ಯಾರ ಅವರ ಬದುಕು ಮತ್ತು ಕನ್ನಡಪರ ಹೋರಾಟ ನಮಗೆಲ್ಲರಿಗೂ ಆದರ್ಶವಾಗಬೇಕು. ಕಾಸರಗೋಡಿನ ಕನ್ನಡ ಭಾಷೆ ಇತರರಿಗೆ ಮಾದರಿಯಾಗಿದ್ದು, ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು. 


ಗಡಿನಾಡಿಗೆ ಪರಿಗಣನೆ:

               ಕರ್ನಾಟಕದಿಂದ ನೀಡಲಾಗುತ್ತಿರುವ ವಿವಿಧ ಪ್ರಶಸ್ತಿ ಹಾಗೂ ಇತರ ನೆರವುಗಳ ಕೊಡುಗೆ ಸಂದರ್ಭ ಗಡಿನಾಡಿಗೂ ಹೆಚ್ಚಿನ ಪ್ರಾಶಸ್ತ್ಯ ಲಭಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಪುಸ್ತಕಗಳ ಕೊಡುಗೆ ಜತೆಗೆ ಇತರ ಸವಲತ್ತು ಒದಗಿಸಲಾಗುವುದು. ಕನ್ನಡದ ಕೆಲಸ ನಡೆಸುವ ಸಂಘ ಸಂಸ್ಥೆಗಳನ್ನು ಗುರುತಿಸುವ ಕೆಲಸವೂ ನಡೆದುಬರಬೇಕಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು. 

              ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಸಮಸ್ಥಾಪಕ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಾಹಿತ್ಯ ಸಂಘಟಕರು, ಸಮಾಜಸೇವಕರೂ ಆದ ಆಯಿಷಾ ಎ.ಎ ಪೆರ್ಲ ಅವರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.  ಪೈವಳಿಕೆ ಗ್ರಾಪಂ ಅಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಫಾತಿಮತ್ ಜೌರಾ,  ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ಜಿತೇಂದ್ರ ಎಸ್.ಎಚ್, ಸಮಾಜ ಸೇವಕರಾದ ಪ್ರಸಾದ್ ರೈ ಕಯ್ಯಾರು, ಮೋಹನ್ ರೈ ಕಯ್ಯಾರು, ಗೋಪಾಲ ಶೆಟ್ಟಿ ಅರಿಬೈಲು, ದುಬೈ ಗಡಿನಾಡ ಉತ್ಸವ ಸಮಿತಿ ಕಾರ್ಯದರ್ಶಿ ಅಶ್ರಫ್ ಪಿ.ಪಿ ಬಾಯಾರು, ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಕಯ್ಯಾರು, ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ, ಪಿಟಿಎ ಅಧ್ಯ್ಜಷ ದೀಪಕ್ ಶರ್ಮ, ಸಾಹಿತಿ ಜನಾರ್ದನ ಹಂದೆ, ವಕೀಲ ಉದಯ ಗಟ್ಟಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಸಂಧ್ಯಾಗೀತ ಬಾಯಾರು ಅವರು ಡಾ. ಕಯ್ಯಾರ ಅವರ ಕವಿತೆ ಹಾಡಿದರು.  ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಮುಂದಿನ ಚಟುವಟಿಕೆಗಳಿಗಾಗಿ ಬಸವರಾಜ ಹೊರಟ್ಟಿ ಅವರು ಹತ್ತು ಸಾವಿರ ರೂ. ದೇಣಿಗೆ ನೀಡಿದರು. 

           ಈ ಸಂದರ್ಭ ಭಾರತೀಯ ಸೇನೆಗೆ ಆಯ್ಕೆಯಾದ ಗಿರೀಶ್ ನಾಯ್ಕ್ ಅವರನ್ನು ಗೌರವಿಸಲಾಯಿತು. ಪ್ಲಸ್‍ಟು ತರಗತಿಯಲ್ಲಿ ಉತ್ತಮ ಅಂಕ ದಾಖಲಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಅದ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿದರು. ಪ್ರೊ. ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ನಗುಮುಗಂ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries