HEALTH TIPS

ಕಾಸರಗೋಡು ಸಾರಿ ನಿರ್ಮಾಣ ಘಟಕಕ್ಕೆ ಬೇಕಾಗಿದೆ ಪುನಶ್ಚೇತನ-ಆಸರೆಗಾಗಿ ಕಾಸರಗೋಡು ಪ್ಯಾಕೇಜ್‍ಗೆ ಮೊರೆ


            ಕಾಸರಗೋಡು: ಜಿಲ್ಲೆಗೆ ಮಕುಟಪ್ರಾಯವಾಗಿರುವ ಕಾಸರಗೋಡು ಸೀರೆ ನಿರ್ಮಾಣ ಘಟಕ ತನ್ನ ಗತ ವೈಭವವದತ್ತ ತೆರಳಲು ಸರ್ಕಾರದ ಸಹಾಯ ಯಾಚಿಸುತ್ತಿದೆ. ಕಾಸರಗೋಡಿನ ಸ್ವಂತ ಉತ್ಪನ್ನ ವಾಗಿರುವ ಕಾಸರಗೋಡು ಸೀರೆಯು ತನ್ನದೇ ಆದ ಮಾರುಕಟ್ಟೆ ಹೊಂದಿದೆ. ಜಿಲ್ಲೆಯ ನೇಕಾರರು ಮಾತ್ರ ಹತ್ತಿಯಿಂದ ತಯಾರಿಸುವ ಕಾಸರಗೋಡು ಸಾರಿ, ಕೇರಳದ ಸಾಂಪ್ರದಾಯಿಕ ಸೀರೆಗಿಂತ ವಿಭಿನ್ನ ಶೈಲಿಯಲ್ಲಿ ಕರಾವಳಿ ಮೆರಗನ್ನು ಮೈಗೂಡಿಸಿಕೊಂಡು ಆಕರ್ಷಣೀಯವೆನಿಸಿದೆ.  ಕಾಸರಗೋಡಿನ ನೇಯ್ಗೆ ಪರಂಪರೆಗೆ ಸುಮಾರು ಮೂರು ಶತಮಾನದ ಇತಿಹಾಸವಿದೆ.  ಕೇರಳದಲ್ಲಿ ಇರುವ ನಾಲ್ಕು ಪ್ರಮುಖ ನೇಯ್ಗೆ ಸಂಪ್ರದಾಯಗಳಲ್ಲಿ ಕಾಸರಗೋಡು ಸಾರಿ ಒಂದಾಗಿದೆ.  ಕೇರಳದ ಬಾಲರಾಮಪುರಂ, ಕುತ್ತಂಪಲ್ಲಿ ಮತ್ತು ಚೆಂದಮಂಗಲಂನಲ್ಲಿ ಕೈಮಗ್ಗದ ಉತ್ಪನ್ನಗಳು ಹೆಸರುವಾಸಿಯಾಗಿದೆ. ಸಾದಾ ಅಥವಾ ಪಟ್ಟೆ ಸೀರೆಗಳನ್ನು ಸಾಮಾನ್ಯವಾಗಿ ಬಣ್ಣಬಣ್ಣದ ಹತ್ತಿ ನೂಲಿನಿಂದ ನೇಯಲಾಗುತ್ತದೆ. ಜ್ಯಾಕ್ವಾರ್ಡ್ ಅಥವಾ ಡೋಬಿ ತಂತ್ರ ಬಳಸಿಕೊಂಡು ಕಾಸರಗೋಡು ಸಾರಿಯನ್ನು ಆಕರ್ಷಕವಾಗಿವೆ ತಯಾರಿಸಲಾಗುತ್ತದೆ.  ಈ ಸೀರೆಗಳನ್ನು 60 ರಿಂದ 100 ರವರೆಗಿನ ಥ್ರೆಡ್ ಎಣಿಕೆಯೊಂದಿಗೆ ತಯಾರಿಸಲಾಗುತ್ತಿರುವುದರಿಂದ ಹೆಚ್ಚು ನಾಜೂಕಿಗೆ ಕಾರಣವಾಗುತ್ತಿದೆ.   ಹೆಚ್ಚಿನ ಬಾಳ್ವಿಕೆ ಮತ್ತು ಉಡುಗೆಗೆ ಹೆಚ್ಚು ಸೂಕ್ತವಾಗಿರುವುದರಿಂದ ಕಾಸರಗೋಡು ಸೀರೆ ನಿರಂತರ ಬೇಡಿಕೆಯಿರಿಸಿಕೊಂಡಿದೆ. ಸರ್ಕಾರಿ ಉದ್ಯೋಗಸ್ಥ ಮಹಿಳೆಯರು ಹೆಚ್ಚು ಇಷ್ಟಪಡುತ್ತಿದ್ದು, ದೂರದೂರಿಂದ ಕಾಸರಗೋಡು ಸಾರಿಗಾಗಿ ಕೇಂದ್ರಕ್ಕೆ ಭೇಟಿ ನೀಡುವವರಿದ್ದಾರೆ. ಕಾಸರಗೋಡು ನೇಕಾರರ ಸಹಕಾರಿ ಉತ್ಪಾದನೆ ಮತ್ತು ಮಾರಾಟ ಸಂಸ್ಥೆ 1938 ರಲ್ಲಿ ಸ್ಥಾಪನೆಗೊಂಡಿದೆ. ಸೊಸೈಟಿ ವಿಶೇಷವಾಗಿ 'ಕಾಸರಗೋಡು ಸಾರಿ' ಉತ್ಪಾದನೆ ಮತ್ತು ಮಾರಾಟ ಮಾಡುವುದರ ಜತೆಗೆ ನೇಯ್ಗೆ ತರಬೇತಿ ನೀಡುವ ಮೂಲಕ ಈ ಸಂಪ್ರದಾಯವನ್ನು ಪೋಷಿಸಿಕೊಂಡು ಬರುತ್ತಿದೆ.  


ನೆರವಾದೀತೇ ಕಾಸರಗೋಡು ಪ್ಯಾಕೇಜ್?:

ಕೇರಳ-ಕರ್ನಾಟಕದ ವಿವಿಧೆಡೆ ಹೆಸರುಗಳಿಸಿರುವ ಕಾಸರಗೋಡಿನ ಕೈಮಗ್ಗದ ಸೀರೆ ಉದ್ದಿಮೆ ಕಾರ್ಮಿಕರ ಜತೆಗೆ ಸರ್ಕಾರದ  ಪ್ರೋತ್ಸಾಹದ ಕೊರತೆಯಿಂದ ಸೊರಗಲಾರಂಭಿಸಿದೆ. ಒಂದು ಕಾಲಘಟ್ಟದಲ್ಲಿ ಕುಲಬಾಂಧವರು ಮಾತ್ರ ನಡೆಸುತ್ತಿದ್ದ ನೇಯ್ಗೆಯನ್ನು ಇಂದು ಇತರ ಸಮುದಾಯದವರೂ ನಡೆಸುತ್ತಿದ್ದರೂ, ಈ ಕೆಲಸಕ್ಕೆ ಕಾರ್ಮಿಕರ ಕೊರತೆ ಅತಿಯಾಗಿ ಕಾಡುತ್ತಿದೆ. 600ಮಂದಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯಲ್ಲಿ ಪ್ರಸಕ್ತ 25 ಮಹಿಳೆಯರು ಮತ್ತು 10 ಮಂದಿ ಪುರುಷರು ಸೇರಿದಂತೆ 35 ನುರಿತ ಕಾರ್ಮಿಕರಿದ್ದು, ಈ ವಲಯದಲ್ಲಿ ಕುಶಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ.  ಕಾಸರಗೋಡು ಸಾರಿ ಘಟಕದಲ್ಲಿ ಬಹುತೇಕ ಮಂದಿ ಹಿರಿಯ ಕಾರ್ಮಿಕರಿದ್ದು, ಯುವತಲೆಮಾರು ನೇಯ್ಗೆ ಕೆಲಸಕ್ಕೆ ಲಭ್ಯವಾಗುತ್ತಿರುವುದು ವಿರಳ ಎಂಬುದಾಗಿ ಸೊಸೈಟಿ ಸಿಬ್ಬಂದಿ ತಿಳಿಸುತ್ತಾರೆ. ಕಾಸರಗೋಡಿನ ಸ್ವಂತ ಉತ್ಪನ್ನ, ಭಾರತೀಯ ಕೈಮಗ್ಗದ ಬ್ರ್ಯಾಂಡ್ ಆಗಿರುವ 'ಕಾಸರಗೋಡು ಸಾರಿ'ನಿರ್ಮಾಣ ಕೇಂದ್ರಕ್ಕೆ ಪುನಶ್ಚೇತನ ನೀಡಲು ಜಿಲ್ಲಾಡಳಿತ ಯೋಜನೆ ಸಿದ್ಧಪಡಿಸುತ್ತಿದೆ. ಪ್ರಸಕ್ತ ಕಾಸರಗೋಡು ಸೀರೆ ನಿರ್ಮಾಣ ಘಟಕಕ್ಕೆ ಸರಕಾರದ ನೆರವು ಅತ್ಯಗತ್ಯ ಎಂಬ ಅಂಶವನ್ನು ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಮನಗಂಡಿದೆ.  2009 ರಲ್ಲಿ ಕಾಸರಗೋಡು ಸೀರೆಗಳಿಗೆ ಭೌಗೋಳಿಕ ಸೂಚಕ ಉತ್ಪನ್ನವಾಗಿ ಘೋಷಿಸಲು ಕೇರಳ ಸರ್ಕಾರವು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ  2010 ರಿಂದ, ಭಾರತ ಸರ್ಕಾರವು ಇದನ್ನು ಜಿಯೋ-ಸೂಚಕ ಸ್ಥಾನಮಾನ ಹೊಂದಿರುವ ಉತ್ಪನ್ನವೆಂದು ಗುರುತಿಸಿದೆ. ಪ್ರಸಕ್ತ ಕಾಸರಗೋಡು ಸೀರೆಗಳು ಭಾರತೀಯ ಹ್ಯಾಂಡ್‍ಲೂಂ ಬ್ರಾಂಡ್ ಮತ್ತು ಕೇರಳ ಹ್ಯಾಂಡ್‍ಲೂಂ ಬ್ರಾಂಡ್ ಮುದ್ರೆಯುಳ್ಳ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತದೆ. 

            ಅಭಿಮತ:

        ಜಿಲ್ಲೆಗೆ ಅಭಿಮಾನವಗಿರುವ ಕಾಸರಗೋಡು ಸಾರಿ ಉದ್ದಿಮೆಯನ್ನು ಪ್ರವಾಸೋದ್ಯಮ ಕ್ಷೇತ್ರದೊಂದಿಗೆ ಜೋಡಿಸಿ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ವಿವರವಾದ ಸಭೆ ಆಯೋಜಿಸಲು ಡಿಟಿಪಿಸಿ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರ್ಪಡೆಗೊಳಿಸಿ, ಕಾಸರಗೋಡಿನ ಸೀರೆಗಳ ಉದ್ದಿಮೆಯ ಪುನಶ್ಚೇತನಕ್ಕಾಗಿ ವಿನೂತನ ಯೋಜನೆ ತಯಾರಿಸಲು ಕ್ಷೇತ್ರದ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು.

             ಕೆ. ಇನ್ಬಾಶೇಖರ್, ಜಿಲ್ಲಾಧಿಕಾರಿ

                  ಕಾಸರಗೋಡು



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries