ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಾಲ್ವರು ಸಂಸದರ ತಂಡವು ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರವಿಶಂಕರ್ ಪ್ರಸಾದ್ ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿದ್ದೇವೆ. ಚುನಾವಣೆಯ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಪಕ್ಷದ ಕಾರ್ಯಕರ್ತರು, ಜನರು ಭಯಭೀತರಾಗಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಿಯೂ ಹಿಂಸಾಚಾರದ ನಿದರ್ಶನಗಳು ಕಂಡು ಬಂದಿಲ್ಲ. ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಉತ್ತರಿಸಬೇಕು ಎಂದು ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆಯೂ 2021ರ ವಿಧಾನಸಭಾ ಚುನಾವಣೆ ನಡೆದ ಬಳಿಕವೂ ಹಿಂಸಾಚಾರ ನಡೆದಿತ್ತು. ಮತ್ತೆ ಈ ರೀತಿಯ ಘಟನೆ ಪುನರಾವರ್ತನೆಯಾಗಿದೆ ಎಂದಿದ್ದಾರೆ.
ಚುನಾವಣೋತ್ತರ ಹಿಂಸಾಚಾರದಲ್ಲಿ ಸುಮಾರು 10 ಸಾವಿರ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳನ್ನು ತೊರೆದು ಬಂದಿದ್ದಾರೆ. ಅವರಿಗೆ ಪಕ್ಷದ ಪ್ರಧಾನ ಕಚೇರಿಯಯ ಬಳಿ ಸಂತ್ರಸ್ತರಿಗೆ ಆಶ್ರಯ ನೀಡಿದ್ದೇವೆ ಎಂದು ಬಿಪ್ಲಬ್ ಕುಮಾರ್ ದೇವ್ ತಿಳಿಸಿದ್ದಾರೆ.
ಸಂತ್ರಸ್ತರ ಜತೆ ಪಕ್ಷವು ನಿಲ್ಲುತ್ತದೆ. ಇಲ್ಲಿನ ಪರಿಸ್ಥಿತಿ ಅವಲೋಕಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ವರರಿ ಸಲ್ಲಿಸುತ್ತೇವೆ ಎಂದು ದೇವ್ ಹೇಳಿದ್ದಾರೆ.
ರಾಜ್ಯದಲ್ಲಿ ಆಡಳಿತ ಪಕ್ಷದ ಬೆಂಬಲಿಗರ ವಿರುದ್ಧ ಚುನಾವಣೋತ್ತರ ಹಿಂಸಾಚಾರದ ಆರೋಪ ಸುಳ್ಳು ಎಂದು ಟಿಎಂಸಿ ವಕ್ತಾರ ಜೈಪ್ರಕಾಶ್ ಮಜುಂದಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ರಾಜಕೀಯ ಹಿಂಸಾಚಾರ ನಡೆಯುತ್ತಿದೆ ಎಂಬ ಆರೋಪದ ಕುರಿತು ಪರಿಶೀಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಾಲ್ವರು ಸಂಸರಾದ ಬಿಪ್ಲಬ್ ಕುಮಾರ್ ದೇವ್, ರವಿಶಂಕರ್ ಪ್ರಸಾದ್, ಬ್ರಿಜ್ ಲಾಲ್ ಮತ್ತು ಕವಿತಾ ಪಾಟಿದಾರ್ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.