ನವದೆಹಲಿ: ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸದಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರಕ್ಕೆ ಛೀಮಾರಿ ಹಾಕಿ, ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿಯಲ್ಲಿನ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಹರಿಯಾಣ ಸರ್ಕಾರಕ್ಕೆ ಸೂಚನೆಗಳನ್ನು ನೀಡಬೇಕು ಎಂದು ದೆಹಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ಪೀಠವು ದೆಹಲಿ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿರುವಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಲಾಖೆ ಅಫಿಡವಿಟ್ ಸ್ವೀಕರಿಸಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಅರ್ಜಿಯಲ್ಲಿರುವ ದೋಷಗಳನ್ನು ಇನ್ನೂ ಸರಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠವು, 'ನೀವು ಅರ್ಜಿಯ ನ್ಯೂನತೆಗಳನ್ನು ಇನ್ನೂ ತೆಗೆದುಹಾಕಿಲ್ಲವೇ? ನಿಮ್ಮ ಮನವಿಯನ್ನು ನಾವು ತಿರಸ್ಕರಿಸುತ್ತೇವೆ. ಕಳೆದ ವಿಚಾರಣೆಯಲ್ಲೂ ಇದನ್ನು ಹೇಳಲಾಗಿದೆ, ಆದರೆ ನೀವು ತಪ್ಪುಗಳನ್ನು ಸರಿಪಡಿಸಲಿಲ್ಲ. ನಿಮ್ಮ ಪ್ರಕರಣ ಎಷ್ಟೇ ಮುಖ್ಯವಾಗಿದ್ದರೂ ನೀವು ನ್ಯಾಯಾಲಯದ ವಿಚಾರಣೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ' ಎಂದು ಹೇಳಿದೆ.
'ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಲಿಸಿದ ದಾಖಲೆಗಳನ್ನು ನಾವು ಸ್ವೀಕರಿಸುತ್ತಿಲ್ಲ. ನೀವು ಯಾವುದೇ ದಾಖಲೆಯನ್ನು ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿ ನಂತರ ನಿಮಗೆ ನೀರಿನ ಕೊರತೆಯಿದೆ ಎಂದು ಹೇಳುತ್ತೀರಿ ಹಾಗೂ ಇಂದೇ ಆದೇಶವನ್ನು ರವಾನಿಸುತ್ತೀರಿ. ನೀವು ತ್ವರಿತ ಕ್ರಮವನ್ನು ಬಯಸುತ್ತೀರಿ, ಆದರೆ ನೀವೇ ಆರಾಮವಾಗಿ ಕುಳಿತುಕೊಳ್ಳುತ್ತೀರಿ. ಎಲ್ಲವೂ ದಾಖಲೆಯಲ್ಲಿರಲಿ. ಇದನ್ನು ನಾವು ನಾಳೆಯ ಮರುದಿನ ಕೇಳುತ್ತೇವೆ' ಎಂದು ಹೇಳಿದ ಪೀಠವು ಪ್ರಕರಣದ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
ಪತ್ರಿಕೆಗಳಲ್ಲಿ ಈ ಪ್ರಕರಣದ ಬಗ್ಗೆ ಸಾಕಷ್ಟು ಬರೆಯಲಾಗುತ್ತಿರುವ ಕಾರಣ ಅವರು ಮೊದಲು ಪ್ರಕರಣದ ಕಡತಗಳನ್ನು ಓದಲು ಬಯಸುತ್ತಾರೆ ಎಂದು ಪೀಠ ಹೇಳಿದೆ. ಒಂದು ವೇಳೆ ನಾವು ಕಡತಗಳನ್ನು ಓದದಿದ್ದರೆ ಪತ್ರಿಕೆಗಳಲ್ಲಿ ಬರುವ ವರದಿಯಿಂದಲೂ ಪ್ರಭಾವಿತರಾಗಬಹುದು. ಇದು ಯಾವ ಪಕ್ಷಕ್ಕೂ ಒಳ್ಳೆಯದಲ್ಲ ಎಂದು ತಿಳಿಸಿದೆ.