ತಿರುವನಂತಪುರ: ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಗೃಹ ಇಲಾಖೆಯ ಕೆಲ ಅಧಿಕಾರಿಗಳು ತನಿಖೆಯನ್ನು ಸಿಬಿಐಗೆ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಕುಟುಂಬದವರ ಕೋರಿಕೆಯಂತೆ ತಕ್ಷಣವೇ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದರು.
ಸಿದ್ಧಾರ್ಥ್ ರ್ಯಾಗಿಂಗ್ ಗೆ ಬಲಿಯಾದ ಹಿನ್ನೆಲೆಯಲ್ಲಿ 12 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ತನಿಖೆಯನ್ನು ಸಿಬಿಐಗೆ ವಹಿಸಲು ವಿಫಲರಾದ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರ ವಿಫಲವಾಗಿಲ್ಲ, ಗೃಹ ಇಲಾಖೆಯ ಕೆಲವು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಮುಖ್ಯಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಹೇಳಿದರು.
ನೆಡುಮಾಂಗಾಡ್ ಮೂಲದ ಸಿದ್ಧಾರ್ಥ್ ಫೆಬ್ರವರಿ 18 ರಂದು ಹಾಸ್ಟೆಲ್‍ನ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿನಲ್ಲಿ ನಿಗೂಢವಿದೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐನ ಚಾರ್ಜ್ ಶೀಟ್ ನಲ್ಲಿದ್ದ 19 ಮಂದಿಗೆ ಕೆಲ ವಾರಗಳ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಆರೋಪಿ ವಿದ್ಯಾರ್ಥಿಗಳು ಸಿದ್ಧಾರ್ಥ್ ನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿ ಸಿಎಸ್ ಡಯಾಸ್ ಅವರ ಏಕ ಪೀಠ ಜಾಮೀನು ನೀಡಿದೆ.