ಒಂದೊಂದು ಕಾಲದಲ್ಲಿ ಒಂದೊಂದು ಕಾಯಿಲೆಗಳು ಜನರನ್ನು ಕಾಡುತ್ತಲೇ ಇರುತ್ತದೆ. ಆದರೆ ಈ ವೈರಸ್ ಹರಡುವಿಕೆಯಿಂದ ಉಂಟಾಗುವ ಪಿಡುಗು ಸ್ವಲ್ಪ ಅಪಾಯಕಾರಿ ಏಕೆಂದರೆ ಈ ವೈರಸ್‌ಗಳು ಜನರ ಜೀವ ತೆಗೆಯುವಷ್ಟು ಶಕ್ತಿಶಾಲಿಯಾಗಿರುತ್ತವೆ. ಇಂತಹ ಕಾಯಿಲೆಗಳಲ್ಲಿ ಹಕ್ಕಿ ಜ್ವರವೂ ಒಂದು.
ಹಕ್ಕಿ ಜ್ವರ ಪಕ್ಷಿಗಳಿಂದ ಮುಖ್ಯವಾಗಿ ಕೋಳಿಗಳಿಂದ ಹರಡುವ ಒಂದು ಅಪಾಯಕಾರಿ ಕಾಯಿಲೆಯಾಗಿದೆ. ಕೊರೊನಾ ಆತಂಕದ ನಡುವೆಯೇ ಇದೀಗ ಹಕ್ಕಿ ಜ್ವರದ ಭೀತಿ ಭಾರತದಲ್ಲಿ ಆರಂಭವಾಗಿತ್ತು. ಕೇರಳ, ಕರ್ನಾಟಕ ಸೇರಿ ಹಲವು ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಲಕ್ಷ ಲಕ್ಷ ಕೋಳೀಗಳ ವಧೆ ಮಾಡಲಾಗಿತ್ತು.
ಈ ಹಕ್ಕಿ ಜ್ವರವೂ ಏವಿಯನ್ ಇನ್‌ಫ್ಲುಂಜಾ ಎಂಬ ಅಪಾಯಕಾರಿ ವೈರಸ್ ಹರಡುವಿಕೆಯಿಂದ ಬರುತ್ತದೆ. ಈ ವೈರಸ್ ಕಾಡು ಹಕ್ಕಿ ಹಾಗೂ ಸಾಕು ಪ್ರಾಣಿಗಳಾದ ಕೋಳಿ, ಬಾತುಕೋಳಿ, ಟರ್ಕಿ ಇವುಗಳಿಗೂ ಹರಡುವುದು. ವೈರಸ್ ತಗುಲಿದ ಪಕ್ಷಿಗಳ ಎಂಜಲು, ಮಲ, ಮೂತ್ರ ಇವುಗಳ ಮೂಲಕ ಈ ರೋಗ ಇತರರಿಗೆ ಹರಡುತ್ತದೆ ಎಂದು ತಿಳಿದುಬಂದಿದೆ, ಈ ಪ್ರಾಣಿಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೂ ಸಹ ಈ ವೈರಸ್ ಹರಡಿ ಆತ ಹಾಸಿಗೆ ಹಿಡಿಯುವ ಸ್ಥಿತಿ ಉಂಟಾಗುತ್ತದೆ.
ಆದರೆ ಈಗ ಈ ಹಕ್ಕಿಜ್ವರದ ಕಾರಣದಿಂದಾಗಿ ಮೊಟ್ಟ ಮೊದಲ ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬರು ಹಕ್ಕಿಜ್ವರದ H5N2 ರೂಪಾಂತರದ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ಹೇಳಿದೆ.
ಜ್ವರ, ಉಸಿರಾಟದ ತೊಂದರೆ, ಅತಿಸಾರ ಮತ್ತು ವಾಕರಿಕೆ ನಂತರ ಏಪ್ರಿಲ್ 24 ರಂದು ಸಾವನ್ನಪ್ಪಿದ ರೋಗಿಯು ಈ ಹಕ್ಕಿ ಜ್ವರದಿಂದಾಗಿ ಮೃತಪಟ್ಟಿರುವುದಾಗಿ ದೃಢಪಟ್ಟಿದೆ. 59 ವರ್ಷದ ವ್ಯಕ್ತಿಯನ್ನು ಮೆಕ್ಸಿಕೋ ನಗರದಲ್ಲಿ ಆಸ್ಪತ್ರೆಗೆ ಕರೆದೊಯ್ದ ನಂತರ ಮೆಕ್ಸಿಕನ್ ಆರೋಗ್ಯ ಅಧಿಕಾರಿಗಳು ಮೇ 23 ರಂದು ಯುಎನ್ ಆರೋಗ್ಯ ಸಂಸ್ಥೆಗೆ ವೈರಸ್‌ನೊಂದಿಗೆ ಮಾನವ ಸೋಂಕಿನ ದೃಢಪಡಿಸಿದ ಪ್ರಕರಣವನ್ನು ವರದಿ ಮಾಡಿದರು.
WHO ಈ ಪ್ರಕರಣವು "ಜಾಗತಿಕವಾಗಿ ವರದಿಯಾದ ಇನ್ಫ್ಲುಯೆನ್ಸ A(H5N2) ವೈರಸ್ ಸೋಂಕಿನ ಮೊದಲ ಪ್ರಯೋಗಾಲಯ-ದೃಢೀಕರಿಸಿದ ಮಾನವ ಪ್ರಕರಣವಾಗಿದೆ" ಎಂದು ತಿಳಿಸಿದೆ. ಈವರೆಗೆ ಸೋಂಕಿತರು ಬೇರೆ ಕಾರಣಗಳಿಂದ ಮೃತಪಟ್ಟಿರಬಹುದು. ಆದರೆ ಇದೇ ವೈರಸ್‌ನಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ.
ವೈರಸ್‌ಗೆ ಒಡ್ಡಿಕೊಳ್ಳುವ ಮೂಲವು ತಿಳಿದಿಲ್ಲ. ಏಕೆಂದರೆ ಆತ ಕೋಳಿಗಳ ಸಂಪರ್ಕಕ್ಕಾಗಲಿ, ಸಾಕು ಪ್ರಾಣಿಗಳ ಸಂಪರ್ಕವನ್ನೇ ಹೊಂದಿಲ್ಲ, ಆದರೂ ವೈರಸ್ ತಗುಲಿದ್ದ ಕುರಿತು ಅಚ್ಚರಿ ಮೂಡಿಸಿದೆ. ಜೊತೆಗೆ ಆ ನಗರದಲ್ಲಿ ಹಕ್ಕಿಜ್ವರ ಸೇರಿದಂತೆ ಬೇರೆ ವೈರಲ್ ಫೀವರ್‌ಗಳ ಪ್ರಕರಣಗಳು ಸಹ ದಾಖಲಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ಆದರೆ ಇತ್ತೀಚಿಗೆ ಈ ಹಕ್ಕಿ ಜ್ವರದಂತಹ ಪ್ರಕರಣವು ಡೈರಿ ಪ್ರೊಡಕ್ಸ್ ಆಗಿರುವ ಹಾಲಿನಿಂದ ಹರಡುತ್ತಿದೆ ಎಂದು ವರದಿಯಾಗಿತ್ತು. ಈ ಪ್ರಕರಣದಲ್ಲೂ ಈ ಮೂಲದಲ್ಲಿ ವೈರಸ್ ಹರಡಿದೆಯೇ ಎಂಬ ಕುರಿತು ಅಧ್ಯಯನ ನಡೆಯುತ್ತಿದೆ.
ಮೊದಲಿಗೆ 2011ರಲ್ಲಿ ಹಕ್ಕಿ ಜ್ವರ ಹನ್ನೆರಡಕ್ಕೂ ಅಧಿಕ ದೇಶಗಳಲ್ಲಿ ಕಂಡು ಬಂದಿತ್ತು. ಬಾಂಗ್ಲದೇಶ, ಕಾಂಬೋಡಿಯಾ, ಈಜಿಪ್ಟ್, ಇಂಡೋನೇಷ್ಯಾ ಈ ದೇಶಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ ಈ ಹಕ್ಕಿ ಜ್ವರ ವ್ಯಾಪಕವಾಗಿ ಹರಡಿತ್ತು, ಅದರಲ್ಲೂ ಕೋವಿಡ್ ಸಾಂಕ್ರಾಮಿಕ ರೋಗದ ಕಾಲದಲ್ಲಿ ಇದರ ಅಪಾಯ ಹೆಚ್ಚಾಗಿತ್ತು.
ಹಕ್ಕಿ ಜ್ವರದ ಲಕ್ಷಣಗಳೇನು?
ಜ್ವರ, ಕೆಮ್ಮು, ಗಂಟಲು ಕೆರೆತ ಹಾಗೂ ಮೈ ಚಳಿಯಾಗುವುದು. ಏವಿಯನ್ ಇನ್‌ಫ್ಲುಂಜಾ ಕಣ್ಣಿನ ತೊಂದರೆ, ಉಸಿರಾಟದ ತೊಂದರೆ, ನ್ಯೂಮೋನಿಯಾ ಉಂಟು ಮಾಡಬಹುದು, ಹಕ್ಕಿ ಜ್ವರ ಪ್ರಾಣಕ್ಕೆ ಅಪಾಯಕಾರಿಯಾದ ಕಾಯಿಲೆಯಾಗಿದೆ.