ಲಖನೌ: ನೀಟ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ವಿವಾದಗಳು ಹರಿದಾಡುತ್ತಿರುವ ಬೆನ್ನಲ್ಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಬಗ್ಗೆ ಮತ್ತು ವಿವಿಧ ರಾಜ್ಯಗಳಲ್ಲಿ ಕೆಲಸ ಕೊಡಿಸಲು ಹಣ ಪಡೆದಿರುವುದಾಗಿ ಉತ್ತರಪ್ರದೇಶದ ಶಾಸಕನೊಬ್ಬ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ(ಎಸ್‌ಬಿಎಸ್‌ಪಿ) ಶಾಸಕ ಬೇಡಿ ರಾಮ್ ಎಂಬುವವರು ಮಾತನಾಡಿರುವ ವಿಡಿಯೊ ಇದಾಗಿದ್ದು, ಹಣ ಕೊಟ್ಟು ನನ್ನ ಮೂಲಕ ವಿವಿಧ ರಾಜ್ಯಗಳಲ್ಲಿ ಹಲವರು ಕೆಲಸ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳಲ್ಲಿ ನನಗೆ ಸಂಪರ್ಕವಿದೆ ಹಾಗೂ ನಾನು ಸಣ್ಣ ಕೆಲಸಗಳನ್ನು ತೆಗೆದುಕೊಳ್ಳುವುದಿಲ್ಲ. ಅಧಿಕ ಪ್ರಮಾಣದ ಅಭ್ಯರ್ಥಿಗಳಿರುವ ದೊಡ್ಡ ಡೀಲ್ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಜಖಾನಿಯ ಕ್ಷೇತ್ರದ ಶಾಸಕ ರಾಮ್ ಹೇಳಿರುವುದು ವಿಡಿಯೊದಲ್ಲಿದೆ.
ಎಸ್‌ಬಿಎಸ್‌ಪಿ ಪಕ್ಷದ ಅಧ್ಯಕ್ಷ ಮತ್ತು ಉತ್ತರಪ್ರದೇಶದ ಸಚಿವ ಓಂ ಪ್ರಕಾಶ್ ರಾಜಭರ್ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಶಾಸಕ ರಾಮ್, ಸರ್ಕಾರಿ ಕೆಲಸ ಕೊಡಿಸಿದ್ದಕ್ಕೆ ಹಣ ಕೊಡುವ ಬಗ್ಗೆ ಬೇರೊಬ್ಬರ ಜೊತೆಯೂ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಈ ನಡುವೆ, ಶಾಸಕ ರಾಮ್‌ಗೆ ಹಣ ನೀಡಿಯೂ ತಮಗೆ ಉದ್ಯೋಗ ಸಿಗದಿರುವ ಬಗ್ಗೆ ಯುವಕನೊಬ್ಬ ಮಾಡಿರುವ ವಿಡಿಯೊ ಸಹ ಹರಿದಾಡುತ್ತಿದೆ. ಈ ಬಗ್ಗೆ ರಾಮ್ ಪ್ರತಿಕ್ರಿಯೆ ನೀಡಿಲ್ಲ.
ಈ ವಿಡಿಯೊಗೆ ಇಂಬು ನೀಡುವಂತೆ, 2014ರಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಮ್ ಬಂಧನಕ್ಕೊಳಗಾಗಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಈ ನಡುವೆ, ಪ್ರಶ್ನೆಪತ್ರಿಕೆ ಸೋರಿಕೆ ಒಪ್ಪಿಕೊಂಡಿರುವ ಬೇಡಿ ರಾಮ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಪಕ್ಷಗಳು ಒತ್ತಾಯಿಸಿವೆ.
'ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ತಮ್ಮ ಪಾತ್ರದ ಬಗ್ಗೆ ಒಪ್ಪಿಕೊಂಡ ಬಳಿಕವೂ ಎನ್‌ಡಿಎಯಲ್ಲಿ ರಾಮ್ ಹೇಗೆ ಮುಂದುವರಿಯುತ್ತಿದ್ದಾರೆ'ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿರುವ ಉತ್ತರ ಪ್ರದೇಶದ ಬಿಜೆಪಿ ಮುಖಂಡರು, ಪ್ರಕರಣ ತನಿಖಾ ಹಂತದಲ್ಲಿದೆ ಎಂದಷ್ಟೇ ಹೇಳಿದ್ದಾರೆ.