ಕಾಸರಗೋಡು: ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮುಖ್ಯಶಿಕ್ಷಕರ ಕಚೇರಿ ಬಾಗಿಲು ಒಡೆದು ನುಗ್ಗಿದ ಕಳ್ಳರು 12ಸಾವಿರ ರೂ. ನಗದು ಹಾಗೂ ಕ್ಯಾಮರಾ ಕಳವುಗೈದಿದ್ದಾರೆ. ಆರೋಪಿಗಳ ದೃಶ್ಯಾವಳಿಯ ಸಿಸಿ ಕ್ಯಾಮರಾ ದೃಶ್ಯಗಳು ಪತ್ತೆಯಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ವ್ಯಾಪಕ ತಪಾಸಣೆ ಆರಂಬಿಸಿದ್ದಾರೆ.
ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಗಳನ್ನೂ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ ಇಬ್ಬರು ಯುವಕರು ಪರಸ್ಪರ ಮಾತಾಡಿಕೊಂಡು ನಡೆದುಬರುತ್ತಿರುವುದು ಹಾಗೂ ಶಾಲೆ ಕಚೇರಿ ಬಳಿ ಬರುತ್ತಿರುವ ದೃಶ್ಯಗಳೂ ಲಭ್ಯವಾಗಿದೆ. ಶುಕ್ರವಾರ ನಸುಕಿನ ನಾಲ್ಕರ ವೇಳೆಗೆ ಕಳವು ನಡೆದಿದ್ದು, ನಾಲ್ಕು ಕಪಾಟುಗಳನ್ನು ಒಡೆದು ತೆಗೆದು ದಾಖಲೆಗಳನ್ನು ಚಲ್ಲಾಪಿಲ್ಲಿಗೊಳಿಸಲಾಗಿದೆ. ನೀಲೇಶ್ವರ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ಉಮೇಶನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ.