ನವದೆಹಲಿ: ಮರಣಕ್ಕೂ ಮುನ್ನ ವ್ಯಕ್ತಿ ನೀಡುವ ಹೇಳಿಕೆ ಪ್ರಾಮಾಣಿಕವಾಗಿದ್ದಲ್ಲಿ ಅದು ನ್ಯಾಯಾಲಯದ ವಿಶ್ವಾಸ ಹೆಚ್ಚಿಸುತ್ತದೆ. ಯಾವುದೇ ದೃಢೀಕರಣವಿಲ್ಲದೆಯೇ, ಇಂತಹ ವಿಶ್ವಾಸಾರ್ಹ 'ಮರಣಪೂರ್ವ ಹೇಳಿಕೆಯನ್ನೇ ಅಪರಾಧ ನಿರ್ಣಯಕ್ಕೆ ಆಧಾರವಾಗಿ ಪರಿಗಣಿಸಬಹುದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ನ್ಯಾಯಾಲಯವು ಮರಣಪೂರ್ವ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಂತಹ ಹೇಳಿಕೆಯು ದೃಢವಾಗಿಯು, ನಂಬಲರ್ಹವಾಗಿಯೂ ಹಾಗೂ ಯಾರದೋ ನಿರ್ದೇಶನವಿಲ್ಲದೇ ನೀಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು' ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ಹೇಳಿದೆ.
ಪತ್ನಿಯನ್ನು ಕೊಲೆ ಮಾಡಿದ್ದ, ಸೇನೆಯ ಮಾಜಿ ಸಿಬ್ಬಂದಿ ಅಪರಾಧಿ ಎಂದು ತೀರ್ಮಾನಿಸಿದ್ದನ್ನು ಎತ್ತಿ ಹಿಡಿದು ಮೇ 15ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಪೀಠ ಈ ಮಾತು ಹೇಳಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 22 ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು. ಸೇನೆಯ ಮಾಜಿ ಸಿಬ್ಬಂದಿಯ ಪತ್ನಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರು.
'ಯಾವುದೇ ವ್ಯಕ್ತಿ ನೀಡುವ ಮರಣಪೂರ್ವ ಹೇಳಿಕೆಯನ್ನು ಒಪ್ಪಿಕೊಳ್ಳುವ ಮುನ್ನ, ಆ ಹೇಳಿಕೆಯನ್ನು ಸ್ವಯಂಪ್ರೇರಣೆಯಿಂದ ನೀಡಲಾಗಿದೆ ಎಂಬ ಬಗ್ಗೆ ನ್ಯಾಯಾಲಯ ತೃಪ್ತಿ ವ್ಯಕ್ತಪಡಿಸಬೇಕು. ಈ ಎಲ್ಲ ಅಂಶಗಳು ದೃಢಪಟ್ಟಾಗ, ಅಂತಹ ಹೇಳಿಕೆಗೆ ಹೆಚ್ಚು ಮಾನ್ಯತೆ ಸಿಗುತ್ತದೆ. ಈ ಹೇಳಿಕೆಯೇ ಅಪರಾಧ ನಿರ್ಣಯಕ್ಕೆ ಆಧಾರವಾಗುತ್ತದೆ' ಎಂದೂ ನ್ಯಾಯಪೀಠ ಹೇಳಿದೆ.
ವಿಚಾರಣಾ ನ್ಯಾಯಾಲಯವು ಸೇನೆಯ ಮಾಜಿ ಸಿಬ್ಬಂದಿ ತಪ್ಪಿತಸ್ಥ ಎಂದು 2008ರಲ್ಲಿ ಆದೇಶಿಸಿತ್ತು. ಆತನಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಶಿಕ್ಷೆಯನ್ನು ಅಮಾನತಿನಲ್ಲಿ ಇಟ್ಟು, 2016ರಲ್ಲಿ ಜಾಮೀನು ನೀಡಿತ್ತು.
ಆದರೆ, ಆತನ ಪತ್ನಿ ನೀಡಿದ್ದ ಮರಣಪೂರ್ವ ಹೇಳಿಕೆಯನ್ನು ಒಪ್ಪಿಕೊಂಡಿದ್ದ ಸುಪ್ರೀಂ ಕೋರ್ಟ್, ಅದನ್ನೇ ಸಾಕ್ಷ್ಯವಾಗಿ ಪರಿಗಣಿಸಿತ್ತು.
'ಮರಣಪೂರ್ವ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಈ ಪ್ರಕರಣದಲ್ಲಿ ಅರ್ಜಿದಾರ ಅಪರಾಧ ಎಸಗಿರುವುದು ಸ್ಪಷ್ಟವಾಗಿದ್ದು, ಆತ ತಪ್ಪಿತಸ್ಥ ಎಂಬುದಾಗಿ ಯಾವುದೇ ಸಂಶಯಕ್ಕೆ ಎಡೆಮಾಡದಂತೆ ಸಾಬೀತುಪಡಿಸಲಾಗಿದೆ' ಎಂದು ಸುಪ್ರೀಂಕೋರ್ಟ್ ಮೇ 15ರಂದು ನೀಡಿದ ಆದೇಶದಲ್ಲಿ ಹೇಳಿದೆ.
ಅಲ್ಲದೇ, ಎರಡು ವಾರದ ಒಳಗಾಗಿ ಶರಣಗಾಗಿ, ಶಿಕ್ಷೆ ಅನುಭವಿಸುವಂತೆಯೂ ಅರ್ಜಿದಾರಗೆ ನಿರ್ದೇಶನ ನೀಡಿದೆ.