ಕಾಸರಗೋಡು: ಬೊವಿಕ್ಕಾನ ಬೇಪು ತೋಣಿಪಳ್ಳ ಎಂಬಲ್ಲಿ ಸಾಕುನಾಯಿಯನ್ನು ವನ್ಯಮೃಗವೊಂದು ಎತ್ತಿಕೊಂಡು ಹೋಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಇಲ್ಲಿನ ನಿವಾಸಿ ನಾರಾಯಣನ್ ಎಂಬವರ ಮನೆ ಎದುರು ಸಂಕೋಲೆಯಲ್ಲಿ ಬಿಗಿಯಲಾಗಿದ್ದ ಸಾಕುನಾಯಿಯನ್ನು ಅಪರಿಚಿತ ವನ್ಯಜೀವಿ ಎತ್ತಿಕೊಂಡು ಹೋಗಿದೆ. ನಾರಾಯಣನ್ ಅವರು ಮೂರು ನಾಯಿಗಳನ್ನು ಸಾಕುತ್ತಿದ್ದು, ಇತರ ಎರಡು ನಾಯಿಗಳು ಗೂಡಿನೊಳಗಿದ್ದ ಕಾರಣ ಬದುಕುಳಿದಿದೆ.
ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪೋನ್ಸ್ ಟೀಮ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಸುಮಾರು 20ಕಿಲೋ ಭಾರದ ನಾಯಿಯನ್ನು ಹೊತ್ತೊಯ್ದಿರುವುದು ಚಿರತೆ ಆಗಿರಬೇಕೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಆಸುಪಾಸಿನಲ್ಲಿ ಹೆಜ್ಜೆಗುರುತನ್ನು ಪರಿಶೋಧಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಯಾವುದೇ ದೃಶ್ಯಾವಳಿ ಪತ್ತೆಯಾಗಿಲ್ಲ. ಆಸುಪಾಸಿನ ಪ್ರದೇಶದಲ್ಲಿ ಈ ಹಿಂದೆ ಚಿರತೆ ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದರೂ, ಪರಿಶೋಧನೆಯಿಂದ ಇದು ದೊಡ್ಡ ಗಾತ್ರದ ಕಾಡು ಬೆಕ್ಕು ಎಂದು ತಿಳಿದು ಬಂದಿತ್ತು. ದೊಡ್ಡಗಾತ್ರದ ನಾಯಿಯನ್ನು ಎತ್ತಿಕೊಂಡು ಹೋಗಿರುವುದರಿಂದ ಇದು ಚಿರತೆ ಆಗಿರಬೇಕೆಂದು ಸಂಶಯಿಸಲಾಗಿದೆ.