ದುಬೈ: ಇರಾನ್‌ನ ಅಧ್ಯಕ್ಷೀಯ ಚುನಾವಣೆಯ ಆರಂಭಿಕ ಮತದಾನದಲ್ಲಿ ಪ್ರಮುಖ ಅಭ್ಯರ್ಥಿಗಳ ಪೈಕಿ ಯಾರಿಗೂ ನಿರ್ಣಾಯಕ ಗೆಲುವು ಲಭಿಸದೇ ಇರುವುದರಿಂದ ಮೊದಲೆರಡು ಸ್ಥಾನ ಗಳಿಸಿರುವ ಅಭ್ಯರ್ಥಿಗಳ ನಡುವೆ ಮತ್ತೊಮ್ಮೆ ಸ್ಪರ್ಧೆ ನಡೆಯಲಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ದುಬೈ: ಇರಾನ್‌ನ ಅಧ್ಯಕ್ಷೀಯ ಚುನಾವಣೆಯ ಆರಂಭಿಕ ಮತದಾನದಲ್ಲಿ ಪ್ರಮುಖ ಅಭ್ಯರ್ಥಿಗಳ ಪೈಕಿ ಯಾರಿಗೂ ನಿರ್ಣಾಯಕ ಗೆಲುವು ಲಭಿಸದೇ ಇರುವುದರಿಂದ ಮೊದಲೆರಡು ಸ್ಥಾನ ಗಳಿಸಿರುವ ಅಭ್ಯರ್ಥಿಗಳ ನಡುವೆ ಮತ್ತೊಮ್ಮೆ ಸ್ಪರ್ಧೆ ನಡೆಯಲಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮುಂದಿನ ಶುಕ್ರವಾರ ನಡೆಯಲಿರುವ ಮತದಾನದಲ್ಲಿ ಸುಧಾರಣಾವಾದಿ ಮಸೂದ್ ಪೆಜೆಶ್ಕಿಯಾನ್ ಹಾಗೂ ಸಂಪ್ರದಾಯವಾದಿ ಸಯೀದ್ ಜಲೀಲಿ ಅವರಲ್ಲಿ ಒಬ್ಬರನ್ನು ಜನ ಆಯ್ಕೆ ಮಾಡಬೇಕಿದೆ.
ಚುನಾವಣಾ ವಕ್ತಾರರಾದ ಮೊಹ್ಸಿನ್ ಇಸ್ಲಾಮಿ ಅವರು ಶುಕ್ರವಾರ ನಡೆದ ಮತದಾನದ ಫಲಿತಾಂಶವನ್ನು ಘೋಷಣೆ ಮಾಡಿದರು. ಒಟ್ಟು 2 ಕೋಟಿ 45 ಲಕ್ಷ ಮಂದಿ ಮತದಾನ ಮಾಡಿದ್ದು, ಅದರ ಪೈಕಿ ಪೆಜೆಶ್ಕಿಯಾನ್ ಒಂದು ಕೋಟಿ 40 ಲಕ್ಷ ಮತಗಳನ್ನು ಪಡೆದರೆ, ಜಲೀಲಿ ಅವರು 94 ಲಕ್ಷ ಮತಗಳನ್ನು ಪಡೆದರು ಎಂದು ಮೊಹ್ಸಿನ್ ತಿಳಿಸಿದ್ದಾರೆ. ಕಣದಲ್ಲಿದ್ದ ಇತರ ಸ್ಪರ್ಧಿಗಳಾದ ಮೊಹಮ್ಮದ್ ಭಾಘಿರ್ ಖಲೀಬಫ್ 33 ಲಕ್ಷ ಮತಗಳು ಹಾಗೂ ಮುಸ್ತಫಾ ಪೌರ್‌ಮೊಹಮ್ಮದಿ 2.06 ಲಕ್ಷ ಮತಗಳನ್ನು ಪಡೆದಿದ್ದಾರೆ.
ಇರಾನ್ ಕಾನೂನಿನ ಪ್ರಕಾರ, ಯಾವುದೇ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದರೆ, ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 50ಕ್ಕಿಂತ ಹೆಚ್ಚು ಮತ ಪಡೆಯಬೇಕು. ಅದು ಸಾಧ್ಯವಾಗದಿದ್ದರೆ, ಮೊದಲ ಎರಡು ಸ್ಥಾನ ಪಡೆದ ಅಭ್ಯರ್ಥಿಗಳಲ್ಲಿ ಒಬ್ಬರ ಆಯ್ಕೆಗೆ ಒಂದು ವಾರದ ಬಳಿಕ ಮತ್ತೊಮ್ಮೆ ಮತದಾನ ನಡೆಸಲಾಗುತ್ತದೆ. ದೇಶದ ಇತಿಹಾಸದಲ್ಲಿ ಇದುವರೆಗೆ ಒಮ್ಮೆ ಮಾತ್ರ (2005ರಲ್ಲಿ) ಈ ರೀತಿ ನಡೆದಿತ್ತು. ಆಗ ಸಂಪ್ರದಾಯವಾದಿ ಮೊಹಮ್ಮದ್ ಅಹ್ಮದಿನೆಜಾದ್ ಅವರು ಮಾಜಿ ಅಧ್ಯಕ್ಷ ಅಕ್ಬರ್ ಹಾಶಿಮಿ ರಫ್ಸಂಜಾನಿ ಅವರನ್ನು ಸೋಲಿಸಿದ್ದರು.
ಕಡಿಮೆ ಮತದಾನ: ಇರಾನ್‌ನ ಆಂತರಿಕ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದಿರುವ ಮತದಾನದ ಪ್ರಮಾಣವು ಶೇ 40 ಆಗಿದ್ದು, ಇದು 1979ರ ಕ್ರಾಂತಿಯ ಬಳಿಕ ಇದುವರೆಗಿನ ಅತ್ಯಂತ ಕಡಿಮೆ ಮತದಾನ ಪ್ರಮಾಣ ಆಗಿದೆ.