HEALTH TIPS

ಅಗ್ನಿಪಥ ಮರುಪರಿಶೀಲಿಸಲು ಆಗ್ರಹ: ಆರಂಭದಲ್ಲೇ ಬಿಜೆಪಿಗೆ ತಲೆನೋವು

 ವದೆಹಲಿ: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗೆ ಅವಕಾಶ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೆ ತಂದಿದ್ದ 'ಅಗ್ನಿಪಥ' ಯೋಜನೆ ಮರುಪರಿಶೀಲನೆಗೆ ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ (ರಾಮ್‌ವಿಲಾಸ್) ಒತ್ತಾಯಿಸಿವೆ.

ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳಿಗೆ ಟಿಡಿಪಿ ಹಾಗೂ ಜೆಡಿಯು ಪಟ್ಟುಹಿಡಿದಿರುವುದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

'ಅಗ್ನಿಪಥ ಯೋಜನೆ ಬಗ್ಗೆ ಮತದಾರರಿಗೆ ಅಸಮಾಧಾನವಿದೆ. ನಮ್ಮ ಪಕ್ಷವು ಈ ಯೋಜನೆಯ ಮರುಪರಿಶೀಲನೆ ಮಾಡಲು ಮತ್ತು ಕೆಲವೊಂದು ವಿವಾದಾತ್ಮಕ ಮಾನದಂಡಗಳನ್ನು ಕೈಬಿಡಲು ಬಯಸುತ್ತದೆ' ಎಂದು ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್ ಅವರ ಆಪ್ತ, ಪಕ್ಷದ ಮುಖಂಡ ಕೆ.ಸಿ.ತ್ಯಾಗಿ ಗುರುವಾರ ಹೇಳಿದ್ದಾರೆ.

'ಈ ಯೋಜನೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಯೋಜನೆ ಬಗ್ಗೆ ಹಲವರಿಂದ ಅಪಸ್ವರ ಎದ್ದಿರುವ ಕಾರಣ ಮರುಪರಿಶೀಲನೆಗೆ ಕೋರುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ಮರುಪರಿಶೀಲನೆ ಅಗತ್ಯ ಎಂದು ಲೋಕ ಜನಶಕ್ತಿ ಪಾರ್ಟಿ (ರಾಮ್‌ವಿಲಾಸ್) ನಾಯಕ ಚಿರಾಗ್‌ ಪಾಸ್ವಾನ್‌ ಅವರೂ ಆಗ್ರಹಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಯಾವುದೇ ಆತುರ ಇಲ್ಲ. ಸರ್ಕಾರ ರಚನೆಯಾದ ಬಳಿಕ ಯೋಜನೆ ಮರುಪರಿಶೀಲನೆ ವಿಚಾರ ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.

ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಯುವಜನರಿಗೆ ಅವಕಾಶ ಕಲ್ಪಿಸುವ 'ಅಗ್ನಿಪಥ' ಎಂಬ ಹೊಸ ನೇಮಕಾತಿ ಯೋಜನೆಯನ್ನು ಕೇಂದ್ರ ಸರ್ಕಾರ 2022ರ ಜೂನ್‌ನಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು 'ಅಗ್ನಿವೀರ' ಎಂದು ಕರೆಯಲಾಗುತ್ತದೆ. ಇದುವರೆಗೆ ದೇಶದಾದ್ಯಂತ ಸುಮಾರು 50 ಸಾವಿರದಷ್ಟು ಯುವಕರು ಮತ್ತು ಯುವತಿಯರು ಈ ಯೋಜನೆಯಡಿ ಸೇನೆಗೆ ಸೇರ್ಪಡೆಯಾಗಿದ್ದಾರೆ.

ಯುಸಿಸಿ ವಿರೋಧಿಸಿಲ್ಲ: 'ನಮ್ಮ ಪಕ್ಷವು ಏಕರೂಪದ ನಾಗರಿಕ ಸಂಹಿತೆಯನ್ನು (ಯುಸಿಸಿ) ವಿರೋಧಿಸಿಲ್ಲ. ಆದರೆ ಈ ವಿಚಾರದಲ್ಲಿ ಸಂಬಂಧಪಟ್ಟ ಎಲ್ಲ ಭಾಗೀದಾರರ ಜತೆ ಸಮಾಲೋಚನೆ ನಡೆಸಬೇಕು' ಎಂದು ತ್ಯಾಗಿ ಹೇಳಿದ್ದಾರೆ.

ದೇಶದಾದ್ಯಂತ ಜಾತಿಗಣತಿಗೆ ಜೆಡಿಯು ಆಗ್ರಹಿಸಲಿದೆಯೇ ಎಂಬ ಪ್ರಶ್ನೆಗೆ, 'ಯಾವುದೇ ರಾಜಕೀಯ ಪಕ್ಷವು ಜಾತಿ ಗಣತಿಯನ್ನು ವಿರೋಧಿಸಿಲ್ಲ. ಬಿಹಾರ ಈ ವಿಚಾರದಲ್ಲಿ ಇತರರಿಗೆ ಮಾದರಿಯಾಗಿದೆ. ಜಾತಿಗಣತಿ ಇಂದಿನ ಅಗತ್ಯವಾಗಿದ್ದು, ಅದಕ್ಕಾಗಿ ಒತ್ತಾಯಿಸುತ್ತೇವೆ' ಎಂದಿದ್ದಾರೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಪಕ್ಷದ ಮತ್ತೊಂದು ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಸಂಸದರ ಸಭೆ

ನವದೆಹಲಿ: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಲು ಶುಕ್ರವಾರ ಸಭೆ ಸೇರಲಿದ್ದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಡಲಿದ್ದಾರೆ.

ಜೂನ್‌ 9 ರಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಎನ್‌ಡಿಎ ಸಂಸದರ ನಾಯಕರಾಗಿ ಮೋದಿ ಅವರು ಆಯ್ಕೆಯಾದ ನಂತರ ಮೈತ್ರಿಕೂಟದ ಇತರ ಮುಖಂಡರಾದ ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜತೆಗೂಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸರ್ಕಾರ ರಚನೆಗೆ ಸಂಬಂಧಿಸಿದಂತೆ ಗುರುವಾರ ದಿನವಿಡೀ ಸಮಾಲೋಚನೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಸಭೆ ಸೇರಿ ಮೈತ್ರಿಪಕ್ಷಗಳ ಜತೆ ಖಾತೆ ಹಂಚಿಕೆ ಮತ್ತು ತಮ್ಮ ಪಕ್ಷದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಕುರಿತು ಚರ್ಚಿಸಿದ್ದಾರೆ.

ಮೂರು ಖಾತೆಗಳಿಗೆ ಜೆಡಿಯು ಬೇಡಿಕೆ ಸಾಧ್ಯತೆ

ಪಟ್ನಾ: ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ನೂತನ ಸರ್ಕಾರದಲ್ಲಿ ಮೂರು ಸಂಪುಟ ದರ್ಜೆ ಖಾತೆಗಳಿಗೆ ಪಟ್ಟು ಹಿಡಿಯುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

12 ಸಂಸದರನ್ನು ಹೊಂದಿರುವ ಜೆಡಿಯು ಟಿಡಿಪಿ (16 ಸಂಸದರು) ಬಳಿಕ ಬಿಜೆಪಿಯ ಎರಡನೇ ಅತಿದೊಡ್ಡ ಮಿತ್ರಪಕ್ಷ ಎನಿಸಿಕೊಂಡಿದೆ. ಸ್ವಂತ ಬಲದಿಂದ 'ಮ್ಯಾಜಿಕ್‌ ಸಂಖ್ಯೆ' ತಲುಪಲು ಸಾಧ್ಯವಾಗದ ಕಾರಣ ಸರ್ಕಾರ ರಚಿಸಲು ಬಿಜೆಪಿಗೆ ಜೆಡಿಯು ಮತ್ತು ಟಿಡಿಪಿ ಪಕ್ಷಗಳ ಬೆಂಬಲ ನಿರ್ಣಾಯಕವಾಗಿದೆ.

'ಸಂಪುಟ ದರ್ಜೆಯ ಮೂರು ಖಾತೆಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ' ಎಂದು ಪಕ್ಷದ ನಾಯಕರೊಬ್ಬರು ಗುರುವಾರ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್‌ ಕುಮಾರ್‌ ಅವರು ಖಾತೆ ಹಂಚಿಕೆ ಬಗ್ಗೆ ನಿರ್ಧರಿಸಲಿದ್ದಾರೆ. ಆದರೆ ಸಂಪುಟದಲ್ಲಿ ನಮಗೆ ಗೌರವಾರ್ಹ ಪ್ರಾತಿನಿಧ್ಯ ಸಿಗಬೇಕು' ಎಂದು ಪಕ್ಷದ ಮುಖಂಡ ಹಾಗೂ ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್‌ ಕುಮಾರ್‌ ಹೇಳಿದ್ದಾರೆ.

ರೈಲ್ವೆ ಗ್ರಾಮೀಣಾಭಿವೃದ್ಧಿ ಕೃಷಿ ಜಲಸಂಪನ್ಮೂಲ ಮತ್ತು ಬೃಹತ್‌ ಕೈಗಾರಿಕೆಯಂತಹ ಖಾತೆಗಳನ್ನು ತನ್ನದಾಗಿಸಿಕೊಳ್ಳಲು ಜೆಡಿಯು ಬಯಸಿದೆ ಎಂದು ಮೂಲಗಳು ಹೇಳಿವೆ. ರಾಜ್ಯಸಭಾ ಸದಸ್ಯ ಸಂಜಯ್‌ ಝಾ ರಾಜೀವ್‌ ರಂಜನ್ ಸಿಂಗ್ ಕೌಶಲೇಂದ್ರ ಕುಮಾರ್‌ ರಾಮಪ್ರೀತ್‌ ಮಂಡಲ್‌ ಮತ್ತು ಲವ್ಲಿ ಆನಂದ್‌ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳಿ: ನಾಯ್ಡು ಸೂಚನೆ

ಅಮರಾವತಿ: ನವದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಅವರು ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಗೆದ್ದಿದೆ. ಟಿಡಿಪಿ ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನೊಳಗೊಂಡ ಎನ್‌ಡಿಐ ಮೈತ್ರಿಕೂಟವು ರಾಜ್ಯದಲ್ಲಿ 25 ರಲ್ಲಿ 21 ಸ್ಥಾನಗಳಲ್ಲಿ ಜಯಿಸಿದೆ. ನಾಯ್ಡು ಅವರು ಗುರುವಾರ ತಮ್ಮ ನಿವಾಸದಲ್ಲಿ ಸಂಸದರ ಸಭೆ ನಡೆಸಿದರು. ಅವರ ನಿವಾಸಕ್ಕೆ ಬರಲು ಸಾಧ್ಯವಾಗದ ಕೆಲವು ಸಂಸದರು ವರ್ಚುವಲ್‌ ಆಗಿ ಪಾಲ್ಗೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries