ಕಾಸರಗೋಡು: ಸಂಸದರ ನಿಧಿ ಬಳಸಿ ಹೈಮಾಸ್ಟ್ ಲೈಟ್ ಸ್ಥಾಪನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಜಿ ಕೆಪಿಸಿಸಿ ಸದಸ್ಯ ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡ ಬಾಲಕೃಷ್ಣನ್ ಪೆರಿಯಾ ಅವರು ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆಗ್ರಹಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಚುನಾವಣಾ ಪ್ರಚಾರ ಸಂದರ್ಭ ಭಾರೀ ಘೋಷಣೆ ನಡೆಸಿದ್ದರು. ಆದರೆ ಅವರ ಹೈಮಾಸ್ಟ್ ಪ್ರೀತಿಯ ಹಿಂದೆ ಭ್ರಷ್ಟಾಚಾರದ ಹಣವಿದೆ ಎಂದು ಅವರ ಪಕ್ಷದವರೇ ಆರೋಪಿಸುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ, ಸಂಸದರ ನಿಧಿ ದುರ್ಬಳಕೆ, ಅಕ್ರಮ, ಭ್ರಷ್ಟಾಚಾರವನ್ನು ಎಂದಿಗೂ ಸಹಿಸಲಾಗದು ಸಂಸದರ ನಿಧಿ ಲಭ್ಯವಾಗಿರುವ ಎಲ್ಲ ಯೋಜನೆಗಳ ಬಗ್ಗೆ ವಿವರವಾದ ತನಿಖೆಯಾಗಬೇಕು ಎಂದು ಅಶ್ವಿನಿ ಎಂ.ಎಲ್. ಆಗ್ರಹಿಸಿದರು.