ಸಿಲಿಗುರಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇವಲ ವಂದೇ ಭಾರತ್ ರೈಲುಗಳ ಬಗ್ಗೆ ಪ್ರಚಾರ ಮಾಡುತ್ತಾ ಬಿಜೆಪಿ, ದೇಶದ ಸಂಪೂರ್ಣ ರೈಲ್ವೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
'ನಾನು ರೈಲ್ವೆಯಲ್ಲಿ ಹಲವು ಕೆಲಸಗಳನ್ನು ಮಾಡಿದ್ದೆ. ಆದರೆ ಬಿಜೆಪಿಯವರು ಕೇವಲ ವಂದೇ ಭಾರತ್ ರೈಲುಗಳ ಪ್ರಚಾರ ಮಾಡುತ್ತಿದ್ದಾರೆ. ತುರಂತೋ ಎಕ್ಸ್‌ಪ್ರೆಸ್ ಎಲ್ಲಿದೆ? ರಾಜಧಾನಿ ಎಕ್ಸ್‌ಪ್ರೆಸ್ ನಂತರ, ತುರಂತೋ ಅತ್ಯಂತ ವೇಗದ ರೈಲು. ಚುನಾವಣೆಯ ಸಮಯದಲ್ಲಿ ಅವರು ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುತ್ತಾರೆ. ಇಂದು, ಇಡೀ ರೈಲ್ವೆ ಇಲಾಖೆಯು ಸರ್ಕಾರದ ನಿರ್ಲಕ್ಷ್ಯವನ್ನು ಎದುರಿಸುತ್ತಿದೆ'ಎಂದು ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ ರೋಗಿಗಳನ್ನು ಭೇಟಿ ಮಾಡಿದ ನಂತರ ಬ್ಯಾನರ್ಜಿ ಹೇಳಿದ್ದಾರೆ.
ತಾವು ರೈಲ್ವೆ ಸಚಿವರಾಗಿದ್ದಾಗ ಹಲವೆಡೆ ಅಪಘಾತ ತಡೆ ಉಪಕರಣಗಳ ಅಳವಡಿಕೆ ಕುರಿತಂತೆ ಮಾತನಾಡಿದ ಅವರು, 2-3 ಅಪಘಾತಗಳನ್ನು ನೋಡಿದ ಬಳಿಕ ಅಪಘಾತ ತಡೆ ಉಪಕರಣಗಳನ್ನು ಅಳವಡಿಸಿದ್ದೆ. ಬಳಿಕ, ಅಪಘಾತಗಳು ಸ್ಥಗಿತಗೊಂಡಿದ್ದವು ಎಂದಿದ್ದಾರೆ.
ರೈಲ್ವೆ ಸಚಿವಾಲಯದಲ್ಲಿ ಏನಾಗುತ್ತಿದೆಯೊ ಯಾರಿಗೂ ಗೊತ್ತಿಲ್ಲ. ಅಲ್ಲಿ ಹಲವು ಸಮಸ್ಯೆಗಳಿವೆ. ಪ್ರತ್ಯೇಕ ರೈಲ್ವೆ ಬಜೆಟ್ ನಿಲ್ಲಿಸಲಾಗಿದೆ. ರೈಲ್ವೆಗೆ ಈಗ ಪ್ರಾಮುಖ್ಯತೆಯೇ ನೀಡುತ್ತಿಲ್ಲ ಎಂದು ದೂರಿದ್ದಾರೆ.
ನರೇಂದ್ರ ಮೋದಿ ಸರ್ಕಾರ ರೈಲ್ವೆಗೆ ಹೊಸದು ಏನನ್ನೂ ಮಾಡಿಲ್ಲ. ನಾನು ರೈಲ್ವೆ ಸಚಿವೆಯಾಗಿದ್ದಾಗ ಅನುದಾನ ನೀಡಿದ್ದ ರೈಲ್ವೆ ಯೋಜನೆಗಳು ಮತ್ತು ಮೆಟ್ರೊಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದರು.
ಸೋಮವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿಹೊಡೆದು, ಎಕ್ಸ್‌ಪ್ರೆಸ್ ರೈಲಿನ ಹಿಂದಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು. ಪರಿಣಾಮವಾಗಿ ಒಂಬತ್ತು ಜನ ಮೃತಪಟ್ಟಿದ್ದಾರೆ, 41 ಮಂದಿಗೆ ಗಾಯಗಳಾಗಿವೆ.
ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಗರ್ತಲಾದಿಂದ ಸಿಯಾಲದಹ ಕಡೆಗೆ ಸಾಗುತ್ತಿತ್ತು.
ಸರಕು ಸಾಗಣೆ ರೈಲಿನ ಪೈಲಟ್ ಹಾಗೂ ಸಹಪೈಲಟ್, ಪ್ರಯಾಣಿಕ ರೈಲಿನ ಗಾರ್ಡ್ ಕೂಡ ಮೃತಪಟ್ಟಿದ್ದಾರೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಗಾಯಗೊಂಡವರನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.