ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಚ ಜೋ ಬೈಡನ್ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಒಬ್ಬರನ್ನು ಗನ್ ಪಾಯಿಂಟ್‌ನಲ್ಲಿ ದರೋಡೆ ಮಾಡಲಾಗಿದೆ ಎಂದು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಶನಿವಾರ ರಾತ್ರಿ 9.30ರ ಸುಮಾರಿಗೆ ಟಸ್ಟಿನ್ ಫೀಲ್ಡ್ಸ್ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ. ದರೋಡೆ ಕುರಿತ ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ದರೋಡೆಗೆ ಒಳಗಾದ ವ್ಯಕ್ತಿಯು ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆತನ ಬಳಿ ಇದ್ದ ವುಸ್ತುಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ಈ ಸಂದರ್ಭ ಗುಂಡಿನ ಚಕಮಕಿಯೂ ನಡೆದಿದ್ದು, ಶಂಕಿತನಿಗೆ ಗಾಯವಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಶಂಕಿತನನ್ನು ಪತ್ತೆ ಮಾಡುವ ಕಾರ್ಯದಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿಲ್ಲ. ಆದರೆ, ಸಂತ್ರಸ್ತ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದಾಳಿಕೋರನದು ಎನ್ನಲಾದ ವಾಹನ ಕುರಿತಾದ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಗುರುತು ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಮಧ್ಯೆ, ಅಧ್ಯಕ್ಷ ಬೈಡನ್ ಸಹ ಅಂದೇ ಸಂಜೆ ಲಾಸ್ ಏಂಜಲೀಸ್‌ನಲ್ಲಿ ಮಹತ್ವದ ಪ್ರಚಾರ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ತೊಡಗಿದ್ದರು. ಪೀಕಾಕ್ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಲಾ ಜಾರ್ಜ್ ಕ್ಲೂನಿ, ಜೂಲಿಯಾ ರಾಬರ್ಟ್ಸ್ ಮತ್ತು ಬಾರ್ಬರಾ ಸ್ಟ್ರೈಸೆಂಡ್ ಸೇರಿದಂತೆ ಖ್ಯಾತ ನಾಮರು ಭಾಗವಹಿಸಿದ್ದರು.