ಕಾಸರಗೊಡು: ಕುವೈತ್‍ನ ಮಂಗಾಫ್‍ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಡಿದ ಭಾರತೀಯರ ಮೃತದೇಹ ಹೊತ್ತ ಸೇನಾ ವಿಮಾನ ಶುಕ್ರವಾರ ಕೊಚ್ಚಿ ನೆಡುಂಬಾಶ್ಯೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದವರ ಕಣ್ಣುಗಳು ತೇವಗೊಂಡಿತ್ತು. ವಿಮಾನದಿಂದ ಇಳಿಸಿದ ಮೃತದೇಹಗಳನ್ನು ಪ್ರತ್ಯೇಕ ಆಂಬುಲೆನ್ಸ್‍ಗಳ ಮೂಲಕ ಅವರ ಊರಿಗೆ ಕಳುಹಿಸಿಕೊಡಲಾಯಿತು. 23ಮಂದಿ ಕೇರಳೀಯರು ಸೇರಿದಂತೆ 45ಮಂದಿಯ ಮೃತದೇಹ ಕುವೈತ್‍ನಿಂದ ವಿಮಾನದಲ್ಲಿ ತರಲಾಗಿತ್ತು. ಉಳಿದ ಮೃತದೇಹಗಳೊಂದಿಗೆ ವಿಮಾನ ದೆಹಲಿಗೆ ವಾಪಸಾಗಿತ್ತು. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ ಹಾಗೂ ಇತರ ಮುಖಂಡರು ಅಂತಿಮ ನಮನ ಸಲ್ಲಿಸಿದರು. ಕಾಸರಗೋಡು ಚೆರ್ಕಲ ಸನಿಹದ ಕುಂಡಡ್ಕ ನಿವಾಸಿ ರಂಜಿತ್ ಹಾಗೂ ತೃಕ್ಕರಿಪುರ ಇಳಂಬಚ್ಚಿಯಲ್ಲಿ ವಾಸಿಸುತ್ತಿರುವ ಪಿ. ಕುಞÂಕೇಳು ನಾಯರ್ ಅವರ ಮೃತದೇಹಗಳನ್ನು ಊರಿಗೆ ತಲುಪಿಸಲಾಗಿದ್ದು, ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಿ-130ಜೆ ಸೂಪರ್ ಹಕ್ರ್ಯೂಲಿಸ್ ವಿಮಾನ:
ಭಾರತೀಯ ಸೇನೆ ನಡೆಸಿಕೊಂಡು ಬರುತ್ತಿರುವ ಬೃಹತ್ ರಕ್ಷಣಾ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿರುವ ಸಿ-130ಜೆ ಸೂಪರ್ ಹಕ್ರ್ಯೂಲಿಸ್ ಪ್ರಯಾಣಿಕರ ವಿಮಾನ ಶುಕ್ರವಾರ ಕಣ್ಣೀರ ಕಾರ್ಯಾಚರಣೆಗೆ ಸಾಕ್ಷಿಯಾಗಬೇಕಾಯಿತು. ಕುವೈತ್‍ನ ಮಂಗಾಫ್‍ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಡಿದ ಭಾರತೀಯರ ಮೃತದೇಹ ಹೊತ್ತ ಈ ವಿಮಾನ ಶುಕ್ರವಾರ ಬೆಳಗ್ಗೆ 10ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಗುರುವಾರ ಉತ್ತರಪ್ರದೇಶದ ಹಿನ್‍ಡನ್ ಸೇನಾ ವಿಮಾಣ ನಿಲ್ದಾಣದಿಂದ ಕುವೈತ್ ತೆರಳಿದ್ದ ಸಿ-130ಜೆ ಸೂಪರ್ ಹಕ್ರ್ಯೂಲಿಸ್ ವಿಮಾನ 23ಮಂದಿ ಕೇರಳೀಯರು, ಏಳು ಮಂದಿ ತಮಿಳ್ನಾಡು ನಿವಾಸಿಗಳು ಹಾಗೂ ಒಬ್ಬರು ಕರ್ನಾಟಕ ನಿವಾಸಿಯ ಮ್ರತದೇಹಗಳೊಂದಿಗೆ ಕೊಚ್ಚಿ ನಿಲ್ದಾಣಕ್ಕೆ ಆಗಮಿಸಿತ್ತು. ಕೆಲವೆ ಹೊತ್ತಿನಲ್ಲಿ ಎಮಿಗ್ರೇಶನ್ ಪ್ರಕ್ರಿಯೆ ಪೂರ್ತಿಗೊಳಿಸಿ, ಆಂಬುಲೆನ್ಸ್ ಮೂಲಕ ಮೃತದೆಹಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು.
ಕೇರಳದ 24ಮಂದಿ ಮೃತಪಟ್ಟಿದ್ದು, ಇವರಲ್ಲಿ ಕರುನಾಗಪಳ್ಳಿ ನಿವಾಸಿ ಡೆನ್ನಿಬೇಬಿ ಎಂಬವರ ಕುಟುಂಬ ಮುಂಬೈಯಲ್ಲಿ ನೆಲೆಸಿರುವುದರಿಂದ ಮೃತದೇಹ ಅಲ್ಲಿಗೆ ಕಳುಹಿಸಿಕೊಡಲಾಗಿತ್ತು.
ಕುವೈತ್‍ನ ಮಂಗಾಫ್‍ನ ವಲಸೆ ಕಾರ್ಮಿಕರು ನೆಲೆಸಿದ್ದ ಕಟ್ಟಡದಲ್ಲಿ ಉಂಟಾಗಿರುವ ಅಗ್ನಿ ದುರಂತಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣವೆಂದು ಕುವೈತ್ ಸರ್ಕಾರ ಸ್ಪಷ್ಟ ಪಡಿಸಿದೆ.
ಪ್ಲ್ಯಾಟ್‍ನ ಸೆಕ್ಯೂರಿಟಿ ಸಿಬ್ಬಂದಿ ಕೊಠಡಿಯಲ್ಲಿರಿಸಿದ್ದ ಗ್ಯಾಸ್ ಸಿಲಿಂಡರ್‍ನಿಂದ ಅನಿಲ ಸೋರಿಕೆಯುಂಟಾಗಿ ಅಗ್ನಿ ದುರಂತ ಸಂಭವಿಸಿರುವ ಬಗ್ಗೆ ಈ ಹಿಂದೆ ಸ್ಥಳೀಯ ಮಾಧ್ಯಮಗಳು ವರದಿ ನೀಡಿದ್ದರೂ, ಸರ್ಕಾರ ನಡೆಸಿದ ಉನ್ನತಮಟ್ಟದ ತನಿಖೆಯಿಂದ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣವೆಂಬುದನ್ನು ಕುವೈತ್ ಅಗ್ನಿಶಾಮಕ ದಳವೂ ಖಚಿತಪಡಿಸಿದೆ.