ಬದಿಯಡ್ಕ: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು. ಮೊದಲ ಹೆಜ್ಜೆಯನ್ನಿಟ್ಟ ಮಕ್ಕಳ ಜೊತೆಯಲ್ಲಿ ಪಾಲಕರು, ಅಧ್ಯಾಪಕ ವೃಂದ, ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಗೀತೆಯೊಂದಿಗೆ ಪುಟಾಣಿ ಮಕ್ಕಳು ವಿದ್ಯಾದೇಗುಲ ಪ್ರವೇಶಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ನವೋದಯ ಗ್ರಂಥಪಾಲಕ ಶ್ಯಾಮ ಭಟ್ ಉಪ್ಪಂಗಳ ಮಾತನಾಡಿ, ಬದಿಯಡ್ಕದಲ್ಲಿ ಅದೆಷ್ಟೋ ಶಿಕ್ಷಣ ಸಂಸ್ಥೆಗಳಿವೆ. ಆದರೆ ಇಲ್ಲಿಯ ಕಾರ್ಯಚಟುವಟಿಕೆಗಳು, ಬೋಧನೆಯ ವಿಧಾನವನ್ನು ಸಮೀಪದಿಂದ ಗಮನಿಸಿದಾಗ ಅದೇನೋ ತಿಳಿಯದ ಒಂದು ಆಕರ್ಷಣೆ ಪರಿಸರದಲ್ಲಿ ಉಂಟಾಗುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅಂಕಗಳಿಗೆಯನ್ನೇ ಗುರಿಯಾಗಿಟ್ಟು ದೌಡಾಯಿಸುತ್ತಿರುವ ಪಾಲಕರ ಗಮನಕ್ಕೆ ಬಹುಷಃ ಇದು ಬರಲಾರದು. ಜೀವನಕ್ಕೆ ಬೇಕಾಗಿರುವಂತಹ ಕೌಶಲ್ಯಗಳು, ಬದುಕನಲ್ಲಿ ಅಗತ್ಯವುಳ್ಳ ಜೀವನ ಮೌಲ್ಯಗಳನ್ನು ನೀಡಿ, ಮಕ್ಕಳಲ್ಲಿ ಹುರಿದುಂಬಿಸುತ್ತಾ ಬೋಧಿಸುವುದು ಇಲ್ಲಿಯ ವಿಶೇಷತೆ. ಮುಂದಿನ ದಿನಗಳಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಬಾನೆತ್ತರಕ್ಕೆ ಬೆಳೆದು ನಿಲ್ಲುತ್ತದೆ ಎಂದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಮಾತೃಸಮಿತಿ ಅಧ್ಯಕ್ಷೆ ಲಕ್ಷ್ಮೀ ಜಿ.ಪೈ ಬದಿಯಡ್ಕ ಉಪಸ್ಥಿತರಿದ್ದರು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ವೇದಿಕೆಗೆ ಬರಮಾಡಿಕೊಂಡು ಕರತಾಡನದ ಮೂಲಕ ಅವರನ್ನು ಹುರಿದುಂಬಿಸಿ ಸ್ವೀಕರಿಸುವ ನೂತನ ವಿಧಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.